ಆಡಳಿತಕ್ಕೆ ವೇಗ ನೀಡಿ, ಇಂಧನ ಬಿಕ್ಕಟ್ಟಿಗೆ ಸಿದ್ಧತೆ ನಡೆಸಿ, ‘ವಿಕ್ಷಿತ್ ಭಾರತ್ 2047’ ಗುರಿಗೆ ಒತ್ತು ನೀಡಿ: ಅಮೆರಿಕ–ಇರಾನ್ ಸಂಘರ್ಷದ ನಡುವೆ ಸಚಿವರಿಗೆ ಮೋದಿ ಸಂದೇಶ

Photo| X/@narendramodi
ಹೊಸದಿಲ್ಲಿ: ಅಮೆರಿಕ–ಇರಾನ್ ಸಂಘರ್ಷದಿಂದ ಜಾಗತಿಕ ಇಂಧನ ಪೂರೈಕೆ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚುತ್ತಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಚಿವರಿಗೆ ಮೂರು ಪ್ರಮುಖ ಸಂದೇಶಗಳನ್ನು ನೀಡಿದರು. ಆಡಳಿತದಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು, ಇಂಧನ ಭದ್ರತೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಹಾಗೂ ‘ವಿಕ್ಷಿತ್ ಭಾರತ್ 2047’ ಗುರಿಯತ್ತ ಸರಕಾರ ಬದ್ಧತೆಯಿಂದ ಸಾಗಬೇಕು ಎಂದು ಅವರು ಸೂಚಿಸಿದರು.
ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಮಂತ್ರಿ ಮಂಡಲ ಸಭೆಯಲ್ಲಿ ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಮತ್ತು ಹಾರ್ಮುಝ್ ಜಲಸಂಧಿಯಲ್ಲಿನ ಅಸ್ಥಿರತೆ ಕುರಿತು ವಿಸ್ತೃತ ಚರ್ಚೆ ನಡೆಯಿತು.
‘ಕಡತಗಳ ವಿಲೇವಾರಿ ತ್ವರಿತವಾಗಿರಲಿ’
ಸಚಿವರಿಗೆ ಮೊದಲ ಸಂದೇಶವಾಗಿ ಪ್ರಧಾನಿ ಮೋದಿ ಆಡಳಿತದಲ್ಲಿ ವೇಗ, ಪಾರದರ್ಶಕತೆ ಮತ್ತು ತ್ವರಿತ ಕಾರ್ಯನಿರ್ವಹಣೆಗೆ ಒತ್ತು ನೀಡಿದರು. ಕಡತಗಳ ವಿಲೇವಾರಿ ವಿಳಂಬವಾಗಬಾರದು. ಕಾರ್ಯವಿಧಾನಗಳನ್ನು ಸರಳಗೊಳಿಸಿ ಜನರಿಗೆ ಬೇಗ ಸೇವೆ ಒದಗಿಸಬೇಕು ಎಂದು ಹೇಳಿದರು.
ಸರಕಾರಿ ಕೆಲಸಗಳಲ್ಲಿ ಅನಗತ್ಯ ವಿಳಂಬ ಬೇಡ. ನಾಗರಿಕರ ‘ಜೀವನ ಸರಳ’ತೆ ಹೆಚ್ಚಿಸುವತ್ತ ಅಧಿಕಾರಿಗಳು ಗಮನಹರಿಸಬೇಕು ಎಂದು ಅವರು ಸೂಚಿಸಿದರು.
ಹಿಂದಿನ ಸಾಧನೆಗಳ ಬಗ್ಗೆ ಮಾತ್ರ ಮಾತನಾಡದೆ ಹೊಸ ಗುರಿಗಳ ಸಾಧನೆಗೆ ಆದ್ಯತೆ ನೀಡಬೇಕು. ಕೆಲವು ರಾಜ್ಯಗಳಲ್ಲಿ ವಿಳಂಬವಾಗಿರುವ ಕೇಂದ್ರ ಯೋಜನೆಗಳ ಅನುಷ್ಠಾನವನ್ನು ವೇಗಗೊಳಿಸಬೇಕು ಎಂದರು.
ಇಂಧನ ಭದ್ರತೆ ಕುರಿತು ಎಚ್ಚರಿಕೆ
ಸಭೆಯಲ್ಲಿ ಅಮೆರಿಕ–ಇರಾನ್ ಸಂಘರ್ಷದಿಂದ ಉಂಟಾಗುತ್ತಿರುವ ಇಂಧನ ಬಿಕ್ಕಟ್ಟು ಪ್ರಮುಖ ಚರ್ಚೆಯ ವಿಷಯವಾಗಿತ್ತು. ಪರ್ಷಿಯನ್ ಕೊಲ್ಲಿಯನ್ನು ಅರಬ್ಬೀ ಸಮುದ್ರಕ್ಕೆ ಸಂಪರ್ಕಿಸುವ ಹಾರ್ಮುಝ್ ಜಲಸಂಧಿಯ ಮೂಲಕವೇ ಜಗತ್ತಿನ ತೈಲ ಪೂರೈಕೆಯ ದೊಡ್ಡ ಭಾಗ ಸಾಗುತ್ತದೆ.
ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಬಯೋಗ್ಯಾಸ್ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನಿ ಹೇಳಿದರು.
ಭಾರತ ತನ್ನ ಕಚ್ಚಾ ತೈಲ ಮತ್ತು ಎಲ್ಪಿಜಿ ಅಗತ್ಯಗಳ ದೊಡ್ಡ ಭಾಗವನ್ನು ಹಾರ್ಮುಝ್ ಜಲಸಂಧಿಯ ಮೂಲಕವೇ ಆಮದು ಮಾಡಿಕೊಳ್ಳುವುದರಿಂದ ಕೇಂದ್ರ ಸರಕಾರ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದೆ.
ಜಾಗತಿಕ ಕಚ್ಚಾ ತೈಲ ದರ ಏರಿಕೆಯ ಪರಿಣಾಮ ದೇಶದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಕಂಡುಬಂದಿದೆ. ಎಲ್ಪಿಜಿ ಪೂರೈಕೆಯ ಮೇಲೂ ಒತ್ತಡ ಹೆಚ್ಚುತ್ತಿರುವ ವರದಿಗಳಿವೆ.
ಇಂಧನ ಬಳಕೆಯಲ್ಲಿ ಮಿತವ್ಯಯ ಪಾಲಿಸಬೇಕು ಹಾಗೂ ಅನಿವಾರ್ಯವಲ್ಲದ ವೆಚ್ಚಗಳನ್ನು ಕಡಿಮೆ ಮಾಡಬೇಕು ಎಂಬ ಸೂಚನೆಯನ್ನೂ ಸರಕಾರ ನೀಡಿದೆ.
‘ವಿಕ್ಷಿತ್ ಭಾರತ್ 2047’ ಗುರಿ
ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ‘ವಿಕ್ಷಿತ್ ಭಾರತ್ 2047’ ಗುರಿಯನ್ನು ಕೇವಲ ಘೋಷಣೆಯಾಗಿ ಪರಿಗಣಿಸದೆ ಬದ್ಧತೆಯಾಗಿ ನೋಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಜನರ ಜೀವನಮಟ್ಟವನ್ನು ನೇರವಾಗಿ ಸುಧಾರಿಸುವ ಸುಧಾರಣಾ ಕ್ರಮಗಳಿಗೆ ಆದ್ಯತೆ ನೀಡಬೇಕು. ಸರ್ಕಾರ ಹಿಂದಿನ ಸಾಧನೆಗಳಲ್ಲೇ ತೃಪ್ತಿಪಟ್ಟುಕೊಳ್ಳದೆ ಹೊಸ ಗುರಿಗಳ ಸಾಧನೆಗೆ ಕೆಲಸ ಮಾಡಬೇಕು ಎಂದು ಅವರು ಸಚಿವರಿಗೆ ಹೇಳಿದರು.
ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹಾಗೂ ನೀತಿ ಆಯೋಗದ ಸದಸ್ಯ ರಾಜೀವ್ ಗೌಬಾ ಅವರು ವಿದೇಶಾಂಗ ನೀತಿ, ಆಡಳಿತ ಸುಧಾರಣೆಗಳು ಮತ್ತು ಪ್ರಮುಖ ಯೋಜನೆಗಳ ಅನುಷ್ಠಾನದ ಕುರಿತು ಪ್ರಸ್ತುತಿಗಳನ್ನು ನೀಡಿದರು.
ಸಚಿವ ಸಂಪುಟ ಪುನರ್ರಚನೆಯ ಊಹಾಪೋಹಗಳ ನಡುವೆ ಹಾಗೂ ಹಣದುಬ್ಬರ, ಇಂಧನ ದರ ಏರಿಕೆ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ಆರ್ಥಿಕ ಪರಿಣಾಮಗಳ ಕುರಿತು ವಿರೋಧ ಪಕ್ಷಗಳು ಸರಕಾರದ ವಿರುದ್ಧ ಟೀಕೆ ತೀವ್ರಗೊಳಿಸಿರುವ ಸಂದರ್ಭದಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.






