ಮಹಿಳಾ ಮೀಸಲಾತಿ ಕುರಿತು ಪ್ರಧಾನಿ ಮೋದಿ ಭಾಷಣ | ನೀತಿ ಸಂಹಿತೆ ಉಲ್ಲಂಘನೆ: ECಗೆ ಸಿಪಿಎಂ, ಸಿಪಿಐ ದೂರು

ಪ್ರಧಾನಿ ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ, ಎ.19: ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾದ ಬಳಿಕ, ಮಸೂದೆ ಕುರಿತು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಿಪಿಎಂ ಮತ್ತು ಸಿಪಿಐ ರವಿವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿವೆ.
ಪ್ರಧಾನಿಯವರ ಹೇಳಿಕೆಗಳು ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಉಭಯ ಪಕ್ಷಗಳು ಆರೋಪಿಸಿವೆ. ಸರಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಭಾಷಣವನ್ನು ಪ್ರಸಾರ ಮಾಡಿದ್ದನ್ನೂ ಅವು ಆಕ್ಷೇಪಿಸಿವೆ.
ಭಾಷಣದ ವಿಷಯ, ಧಾಟಿ ಮತ್ತು ಸಂದೇಶವನ್ನು ಯಾವುದೇ ರೀತಿಯಲ್ಲಿಯೂ ಸರಕಾರಿ ಸಂವಹನ ಎಂದು ಕರೆಯಲು ಸಾಧ್ಯವಿಲ್ಲ. ಅದು ಸ್ಪಷ್ಟವಾಗಿ ರಾಜಕೀಯವಾಗಿದ್ದು, ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿತ್ತು; ಹಲವಾರು ಪಕ್ಷಗಳನ್ನು ಹೆಸರಿಸಲಾಗಿತ್ತು ಹಾಗೂ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮತದಾರರು ಸೇರಿದಂತೆ ಜನಾಭಿಪ್ರಾಯದ ಮೇಲೆ ಆಡಳಿತ ಪಕ್ಷದ ಪರವಾಗಿ ಪ್ರಭಾವ ಬೀರಲು ಯತ್ನಿಸಿತ್ತು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಮುಖ್ಯ ಚುನಾವಣಾ ಆಯುಕ್ತ (ಸಿEC) ಜ್ಞಾನೇಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತ್ಯೇಕವಾಗಿ ಸಿಪಿಐ ನಾಯಕ ಸಂತೋಷ ಕುಮಾರ ಅವರು ಕೂಡ ಸಿECಗೆ ಪತ್ರ ಬರೆದಿದ್ದು, ಪ್ರಧಾನಿಯವರ ಭಾಷಣವನ್ನು ‘ಪಕ್ಷಪಾತಪೂರ್ಣ’ ಮತ್ತು ‘ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ನೇರ ಪ್ರಯತ್ನ’ ಎಂದು ಬಣ್ಣಿಸಿದ್ದಾರೆ.
ಇನ್ನೂ ಕಳವಳಕಾರಿ ವಿಷಯವೆಂದರೆ, ಈ ಭಾಷಣವನ್ನು ದೂರದರ್ಶನ ಮತ್ತು ಸಂಸದ್ ಟಿವಿಯಂತಹ ಸರಕಾರಿ ಪ್ರಸಾರ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗಿದೆ. ಮೂಲಭೂತವಾಗಿ ರಾಜಕೀಯ ಭಾಷಣವನ್ನು ಪ್ರಸಾರ ಮಾಡಲು ಸರಕಾರಿ ಸಂಪನ್ಮೂಲಗಳು ಹಾಗೂ ಸರಕಾರಿ ಅನುದಾನಿತ ವೇದಿಕೆಗಳ ಬಳಕೆ ಚುನಾವಣಾ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ಇದು ಚುನಾವಣಾ ಆಯೋಗವು ಎತ್ತಿಹಿಡಿಯಲು ಸಾಂವಿಧಾನಿಕವಾಗಿ ಬದ್ಧವಾಗಿರುವ ಸಮಾನ ಸ್ಪರ್ಧಾ ಅವಕಾಶವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅದು ‘ಸಾಂಸ್ಥಿಕ ಶಾಮೀಲಾತಿ’ಯನ್ನು ಸೂಚಿಸುತ್ತದೆ ಹಾಗೂ ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುತ್ತದೆ ಎಂದೂ ಕುಮಾರ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರು ರಾಜಕೀಯ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದು, ನೀತಿ ಸಂಹಿತೆ ಉಲ್ಲಂಘನೆಗಾಗಿ ತಮ್ಮ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.






