ಅಣ್ವಸ್ತ್ರ ಬೆದರಿಕೆಗೆ ಭಾರತ ಮಣಿಯದು: ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ಭಯೋತ್ಪಾದನೆ ಹಾಗೂ ಅದರ ಪ್ರಾಯೋಜಕ ಪಾಕಿಸ್ತಾನದ ವಿರುದ್ಧ ಕ್ರಮ ತೆಗೆದುಕೊಳ್ಳುವಾಗ ಪರಮಾಣು ಅಸ್ತ್ರಗಳನ್ನು ಮುಂದಿಟ್ಟುಕೊಂಡು ಮಾಡುವ ಯಾವುದೇ ಬ್ಲಾಕ್ ಮೇಲ್ ಅನ್ನು ಭಾರತ ಸಹಿಸದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಾಕಿಸ್ತಾನದ ಉಗ್ರರ ನೆಲೆಗಳ ವಿರುದ್ಧದ ಭಾರತದ ಸೇನಾ ಕಾರ್ಯಾಚರಣೆ ಹಾಗೂ ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿಗೆ ಪ್ರತೀಕಾರದ ಕ್ರಮಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಪಾಕಿಸ್ತಾನದ ಉಗ್ರರು ಹಾಗೂ ಸೇನಾ ನೆಲೆಗಳ ವಿರುದ್ಧದ ಪ್ರತೀಕಾರವನ್ನು ಮಾತ್ರ ಭಾರತ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಕೊನೆಗೊಳಿಸಿಲ್ಲ. ಕದನ ವಿರಾಮಕ್ಕೆ ಪಾಕಿಸ್ತಾನವೇ ಮೊದಲು ಮನವಿ ಮಾಡಿತು ಎಂದು ಅವರು ಹೇಳಿದರು.
‘ಆಪರೇಷನ್ ಸಿಂಧೂರ’ ಕುರಿತು ಶಸಸ್ತ್ರ ಪಡೆಗಳನ್ನು ಶ್ಲಾಘಿಸಿದ ಪ್ರಧಾನಿ, ತಮ್ಮ ಸಹೋದರಿಯರು ಹಾಗೂ ಪುತ್ರಿಯರ ಹಣೆಯ ಮೇಲಿನ ಕುಂಕುಮವನ್ನು ಅಳಿಸುವುದರ ಪರಿಣಾಮ ಏನಾಗುತ್ತದೆ ಎಂಬುದು ಈಗ ಪ್ರತಿಯೊಬ್ಬ ಭಯೋತ್ಪಾದಕನಿಗೆ ಅರಿವಾಗಿದೆ ಎಂದರು.
‘‘ಪಾಕಿಸ್ತಾನ ಆಗ್ರಹಿಸಿದಾಗ ಹಾಗೂ ತಾವು ಯಾವುದೇ ದಾಳಿ ನಡೆಸುವುದಿಲ್ಲ ಎಂದು ಅದು ಖಾತರಿ ನೀಡಿದಾಗ, ಭಾರತ ಕೂಡ ಅದರ ಬಗ್ಗೆ ಯೋಚಿಸಿತು. ನಾನು ಪುನರುಚ್ಚರಿಸುತ್ತಿದ್ದೇನೆ...ನಾವು ಇದುವರೆಗೆ ಪಾಕಿಸ್ತಾನದ ಭಯೋತ್ಪಾದಕರು ಹಾಗೂ ಸೇನಾ ನೆಲೆಗಳ ವಿರುದ್ಧದ ನಮ್ಮ ಪ್ರತೀಕಾರದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಪಾಕಿಸ್ತಾನ ತೆಗೆದುಕೊಳ್ಳುವ ಪ್ರತಿ ಕ್ರಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.
‘‘ಭಯೋತ್ಪಾದನೆ ಹಾಗೂ ಮಾತುಕತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಅದೇ ರೀತಿ ನೀರು ಮತ್ತು ರಕ್ತ ಜೊತೆಯಾಗಿ ಹರಿಯಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದರು.
ಪಾಕಿಸ್ತಾನ ತನ್ನನ್ನು ರಕ್ಷಿಸಿಕೊಳ್ಳಲು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಬೇಕು. ಪಾಕಿಸ್ತಾನದೊಂದಿಗಿನ ಯಾವುದೇ ಮಾತುಕತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತು ಮಾತ್ರ ನಡೆಯುತ್ತದೆ ಎಂದು ಅವರು ಹೇಳಿದರು.
ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ಉಗ್ರರ ಪ್ರಧಾನ ಕೇಂದ್ರವನ್ನು ನಾಶಪಡಿಸಿತು ಹಾಗೂ 100ಕ್ಕೂ ಅಧಿಕ ಉಗ್ರರನ್ನು ಕೊಂದು ಹಾಕಿತು ಎಂದು ಅವರು ತಿಳಿಸಿದರು.
‘‘ಈ ಹೆಚ್ಚಿನ ಅಡಗುದಾಣಗಳು ಪಾಕಿಸ್ತಾನದಲ್ಲಿ ತಿರುಗಾಡುತ್ತಿರುವ ಭಯೋತ್ಪಾದಕರಿಗೆ ಸೇರಿದ್ದಾಗಿದೆ. ಅವರು ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದರು. ಭಾರತ ಕೇವಲ ಒಂದು ಹೊಡೆತದಲ್ಲಿ ಅವರನ್ನು ನಾಶ ಮಾಡಿತು. ಭಾರತದ ಈ ಕ್ರಮದಿಂದ ಪಾಕಿಸ್ತಾನ ಹತಾಶೆಗೆ ಒಳಗಾಯಿತು, ಆಕ್ರೋಶಗೊಂಡಿತು. ಹತಾಶೆಯಲ್ಲಿ ಭಯೋತ್ಪಾದಕರ ವಿರುದ್ಧದ ಭಾರತದ ಕಾರ್ಯಾಚರಣೆಗೆ ಬೆಂಬಲಿಸುವ ಬದಲು ಭಾರತದ ಮೇಲೆ ದಾಳಿ ನಡೆಸಲು ಆರಂಭಿಸಿತು. ನಮ್ಮ ಕಾಲೇಜು, ಶಾಲೆ, ದೇವಾಲಯ, ಗುರುದ್ವಾರವನ್ನು ಗುರಿಯಾಗಿರಿಸಿ ದಾಳಿ ನಡೆಸಿತು’’ ಎಂದು ಪ್ರಧಾನಿ ಹೇಳಿದ್ದಾರೆ.
‘‘ಪಾಕಿಸ್ತಾನ ನಮ್ಮ ಸೇನಾ ಪ್ರದೇಶಗಳನ್ನು ಗುರಿ ಮಾಡಿತು. ನಾವು ಪಾಕಿಸ್ತಾನದ ಎದೆಗೆ ಹೊಡೆದೆವು. ಭಾರತದ ಡ್ರೋನ್, ಕ್ಷಿಪಣಿಗಳು ನಿಖರವಾಗಿ ದಾಳಿ ನಡೆಸಿದವು. ಪಾಕಿಸ್ತಾನದ ವಾಯು ನೆಲೆಗಳನ್ನು ಭಾರತ ಹಾನಿಗೊಳಿಸಿತು. ಮೂರು ದಿನಗಳಲ್ಲಿ ಅವರ ಕಲ್ಪನೆಗೂ ಮೀರಿ ನಾವು ಪಾಕಿಸ್ತಾನವನ್ನು ನಾಶ ಮಾಡಿದೆವು’’ ಎಂದು ಮೋದಿ ಹೇಳಿದ್ದಾರೆ.







