ಪಿಎಂಎಲ್ಎ ಪ್ರಕರಣ | ಅನಿಲ್ ಅಂಬಾನಿ ಸಮೂಹದ ಮಾಜಿ ಎಂಡಿ ಸತೀಶ್ ಸೇಠ್ಗೆ 14 ದಿನಗಳ ನ್ಯಾಯಾಂಗ ಬಂಧನ

ಅನಿಲ್ ಅಂಬಾನಿ | Photo Credit : PTI
ಹೊಸದಿಲ್ಲಿ, ಜೂ. 18: ಹವಾಲಾ ಹಣ ವರ್ಗಾವಣೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಿಲಾಯನ್ಸ್ ಅನಿಲ್ ಅಂಬಾನಿ ಸಮೂಹದ (ಆರ್ಎಎಜಿ) ಮಾಜಿ ಆಡಳಿತ ನಿರ್ದೇಶಕ (ಎಂಡಿ) ಸತೀಶ್ ಸೇಠ್ ಅವರಿಗೆ ದಿಲ್ಲಿ ನ್ಯಾಯಾಲಯ ಗುರುವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಜಾರಿ ನಿರ್ದೇಶನಾಲಯ (ಈ.ಡಿ.) ವಶದಲ್ಲಿದ್ದ ಸತೀಶ್ ಸೇಠ್ ಅವರ ವಿಚಾರಣೆ ಪೂರ್ಣಗೊಂಡ ಬಳಿಕ ರಜಾಕಾಲದ ನ್ಯಾಯಾಧೀಶರಾದ ರಶ್ಮಿ ಗುಪ್ತಾ ಅವರು ಜುಲೈ 2ರ ವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜೈಲಿನಲ್ಲಿರುವಾಗ ವೈದ್ಯರ ನೀಡಿದ ಶಿಫಾರಸಿನಂತೆ ತಮ್ಮ ಕನ್ನಡಕ ಮತ್ತು ಔಷಧಗಳನ್ನು ಕೊಂಡೊಯ್ಯಲು ನ್ಯಾಯಾಲಯ ಸೇಠ್ ಅವರಿಗೆ ಅನುಮತಿ ನೀಡಿದೆ. ಅಲ್ಲದೆ, ಜೈಲು ಕೈಪಿಡಿಯ ಪ್ರಕಾರ ಹಾಸಿಗಾಗಿ ಅವರು ಸಲ್ಲಿಸಿರುವ ವಿನಂತಿಯ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಜೂನ್ 14ರಂದು ನೀಡಲಾಗಿದ್ದ ಆರು ದಿನಗಳ ಜಾರಿ ನಿರ್ದೇಶನಾಲಯದ ಕಸ್ಟಡಿ ಅವಧಿ ಮುಗಿಯುವ ಒಂದು ದಿನ ಮುಂಚಿತವಾಗಿಯೇ ಸತೀಶ್ ಸೇಠ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಅತ್ಯಧಿಕ ಬೆಲೆ ಪಾವತಿಸಿ ವಜ್ರ ಆಮದು ಹೆಸರಿನಲ್ಲಿ ನಕಲಿ ಬಿಲ್ಗಳನ್ನು ಸೃಷ್ಟಿಸಿ ಹವಾಲಾ ಮಾರ್ಗಗಳ ಮೂಲಕ ವಿದೇಶಕ್ಕೆ ಹಣ ವರ್ಗಾಯಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಸತೀಶ್ ಸೇಠ್ ಅವರನ್ನು ಬಂಧಿಸಿದೆ.




