ಗಾಝಾ ಮೇಲೆ ಇಸ್ರೇಲ್ ದಾಳಿ | ಪ್ರಧಾನಿ ಮೋದಿ ಮೌನ ತೀವ್ರ ನಾಚಿಕೆಗೇಡಿನ ಸಂಗತಿ: ಸೋನಿಯಾ ಗಾಂಧಿ ಟೀಕೆ

ಸೋನಿಯಾ ಗಾಂಧಿ (Photo: PTI)
ಹೊಸದಿಲ್ಲಿ: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯು "ನರಮೇಧ"ಕ್ಕೆ ಸಮ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರವಾಗಿ ಟೀಕಿಸಿದ್ದು, ಮಾನವೀಯತೆಗೆ ಮಾಡುತ್ತಿರುವ ಈ ಅವಮಾನದ ಎದುರು ಪ್ರಧಾನಿ ನರೇಂದ್ರ ಮೋದಿ ಅವರ ಮೌನವು ನಾಚಿಕೆಗೇಡಿನ ಸಂಗತಿ. ಅದು ಭಾರತದ ಸಾಂವಿಧಾನಿಕ ಮೌಲ್ಯಗಳ ಮೇಲೆ ಮಾಡುತ್ತಿರುವ ದ್ರೋಹ ಎಂದು ಹೇಳಿದ್ದಾರೆ.
ಹಿಂದಿ ದಿನಪತ್ರಿಕೆ ‘ದೈನಿಕ್ ಜಾಗರಣ್’ನಲ್ಲಿ ಪ್ರಕಟಿಸಿದ ಲೇಖನದಲ್ಲಿ, ಸೋನಿಯಾ ಗಾಂಧಿ ಅವರು, “ಗಾಝಾ ಜನರ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ಮತ್ತು ವಿನಾಶಕಾರಿ ದಾಳಿ ಎದುರು ಪ್ರಧಾನಿಯವರು ಮೌನ ವಹಿಸಿರುವುದು ತೀವ್ರ ನಿರಾಶಾದಾಯಕ. ಇದು ನೈತಿಕ ಹೇಡಿತನದ ಪರಮಾವಧಿ,” ಎಂದು ಕಟುವಾಗಿ ಟೀಕಿಸಿದ್ದಾರೆ.
ಫೆಲೆಸ್ತೀನ್ ವಿಚಾರದಲ್ಲಿ ಭಾರತವು ದೀರ್ಘಕಾಲದಿಂದ ಪ್ರತಿನಿಧಿಸುತ್ತಿರುವ ಪರಂಪರೆಯ ಪರವಾಗಿ ಧೈರ್ಯದಿಂದ ಸ್ಪಷ್ಟವಾಗಿ ಮತ್ತು ನೇರವಾಗಿ ಮಾತನಾಡುವಂತೆ ಸೋನಿಯಾ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಫೆಲೆಸ್ತೀನ್ ನಾಗರಿಕರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ದಾಳಿ, ಆಸ್ಪತ್ರೆಗಳನ್ನು ನಾಶ ಮಾಡುತ್ತಿರುವುದು, ಆಹಾರ–ಔಷಧ ಪೂರೈಕೆಗಳ ತಡೆಯೊಡ್ಡುವಿಕೆ, ಅಲ್ಲಿನ ಜನತೆಗೆ ಆಹಾರ ಸಿಗದಂತೆ ಮಾಡಿ ಹಸಿವಿನಿಂದ ಇರುವಂತೆ ಮಾಡುತ್ತಿರುವ ತಂತ್ರಗಳನ್ನು ಉಲ್ಲೇಖಿಸಿದ ಅವರು, ಇವುಗಳನ್ನು ಮಾನವೀಯತೆಯ ವಿರುದ್ಧದ ಅಪರಾಧಗಳಾಗಿ ಪರಿಗಣಿಸಬೇಕು ಎಂದು ಕರೆ ನೀಡಿದ್ದಾರೆ.
ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಬರ್ಬರ ದಾಳಿಗಳನ್ನು ಅಥವಾ ಇಸ್ರೇಲ್ ನಾಗರಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವುದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಇವುಗಳನ್ನು ಪದೇಪದೇ ತೀವ್ರವಾಗಿ ಖಂಡಿಸಬೇಕು ಎಂದೂ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.
"ಆದರೆ, ಅಂತರರಾಷ್ಟ್ರೀಯ ಸಮುದಾಯದ ಸದಸ್ಯರಾಗಿ, ಅದಕ್ಕಿಂತ ಹೆಚ್ಚಾಗಿ ಮನುಷ್ಯರಾಗಿ ಗಾಝಾದ ನಾಗರಿಕರ ವಿರುದ್ಧ, ಇಸ್ರೇಲ್ ಸರ್ಕಾರದ ಪ್ರತಿಕ್ರಿಯೆ ಮತ್ತು ಪ್ರತೀಕಾರವು ಕೇವಲ ಭೀಕರ ಮಾತ್ರ ಅಲ್ಲ. ಅದು ಸಂಪೂರ್ಣವಾಗಿ ಅಪರಾಧವಾಗಿದೆ ಎಂದು ಒಪ್ಪಿಕೊಳ್ಳುವುದೂ ನಮ್ಮ ಜವಾಬ್ದಾರಿಯಾಗಿದೆ" ಎಂದು ಅವರು 'ಗಾಝಾ ಸಂಕಟ್ ಪರ್ ಮುಖದರ್ಶಕ್ ಮೋದಿ ಸರ್ಕಾರ್' ಎಂಬ ಹಿಂದಿ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ.
"ಅಕ್ಟೋಬರ್ 2023 ರಿಂದ ನಡೆಯುತ್ತಿರುವ ಘಟನೆಗಳು ಆತಂಕಕಾರಿಯಾಗಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹೃದಯ ವಿದ್ರಾವಕವಾಗಿದೆ. ಮಾನವೀಯ ನೆರವು ಹೇಗೆ ಭಯಾನಕ ಕಾರ್ಯತಂತ್ರದ ಭಾಗವಾಗಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡಿದೆ ಎಂಬುದನ್ನು ನಾವು ನೋಡಿದ್ದೇವೆ. ಇಸ್ರೇಲ್ ರಕ್ಷಣಾ ಪಡೆಗಳು ಗಾಝಾದ ಮೇಲೆ ಮಿಲಿಟರಿ ದಿಗ್ಬಂಧನವನ್ನು ವಿಧಿಸಿವೆ", ಎಂದು ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
"ಮಾನವೀಯತೆಯ ಪ್ರತಿಯೊಂದು ಕಲ್ಪನೆಯನ್ನು ವಿರೂಪಗೊಳಿಸುವಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳ ಸಶಸ್ತ್ರ ಸೈನಿಕರು, ತಮ್ಮ ಕುಟುಂಬಗಳಿಗೆ ಆಹಾರವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದ ನೂರಾರು ನಾಗರಿಕರ ಮೇಲೆ ನಿರ್ದಯವಾಗಿ ಗುಂಡು ಹಾರಿಸಿದ್ದಾರೆ. ವಿಶ್ವಸಂಸ್ಥೆಯು ಸ್ವತಃ ಈ ವಿಷಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್ ರಕ್ಷಣಾ ಪಡೆಗಳೂ ಈ ಭಯಾನಕ ಸತ್ಯವನ್ನು ಒಪ್ಪಿಕೊಳ್ಳಬೇಕಾಯಿತು" ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಇದರ ಪ್ರಮಾಣ ಮತ್ತು ಪರಿಣಾಮಗಳು 1948 ರ ನಕ್ಬಾ ದುರಂತವನ್ನು ನೆನಪಿಸುತ್ತವೆ. ಆಗ ಫೆಲೆಸ್ತೀನೀಯರು ತಮ್ಮ ಮನೆಗಳನ್ನು ಬಲವಂತವಾಗಿ ತೊರೆಯಬೇಕಾಯಿತು ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಗಾಝಾದ ಮೇಲೆ ನಡೆಯುತ್ತಿರುವ ಮಿಲಿಟರಿ ಆಕ್ರಮಣದ ಬಗ್ಗೆ ತಜ್ಞರೇ ಇದು ನರಮೇಧಕ್ಕೆ ಸಮನಾದ ಆಕ್ರಮಣ ಮತ್ತು ಅದು ಫೆಲೆಸ್ತೀನ್ ಜನಾಂಗವನ್ನು ನಾಶ ಮಾಡುವ ಗುರಿ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ.
ವಸಾಹತುಶಾಹಿ ಮನಸ್ಥಿತಿಯಿಂದ ಹಿಡಿದು ಕೆಲವು ದುರಾಸೆಯ ರಿಯಲ್ ಎಸ್ಟೇಟ್ ಉದ್ಯಮಿಗಳ ಸ್ವಾರ್ಥದ ಹಿತಾಸಕ್ತಿಗಳವರೆಗೆ, ಕೆಲವು ಅತ್ಯಂತ ದುಷ್ಟ ಉದ್ದೇಶಗಳನ್ನು ಪೂರೈಸಲು ಈ ಎಲ್ಲಾ ದೌರ್ಜನ್ಯಗಳನ್ನು ನಡೆಸಲಾಗುತ್ತಿದೆ. ಈಗ ನಡೆಯುತ್ತಿರುವ ಬಿಕ್ಕಟ್ಟು ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿನ ಅತ್ಯಂತ ಗಂಭೀರ ದೌರ್ಬಲ್ಯಗಳಲ್ಲಿ ಒಂದನ್ನು ಬಹಿರಂಗಪಡಿಸಿದೆ ಎಂದು ಅವರು ಪ್ರತಿಪಾದಿಸಿದರು.
"ಗಾಝಾದಲ್ಲಿ ತಕ್ಷಣದ, ಬೇಷರತ್ತಾದ ಮತ್ತು ಶಾಶ್ವತ ಕದನ ವಿರಾಮವನ್ನು ಕೋರುವ ಯುಎನ್ ಸಾಮಾನ್ಯ ಸಭೆಯ ನಿರ್ಣಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಗಾಝಾದಲ್ಲಿ ನಾಗರಿಕರ ಮೇಲೆ ದಾಳಿ ಮಾಡಿದ್ದಕ್ಕಾಗಿ ಮತ್ತು ಅದರ ಮೂಲಸೌಕರ್ಯದ ದೊಡ್ಡ ಪ್ರಮಾಣದ ನಾಶಕ್ಕಾಗಿ ಇಸ್ರೇಲ್ ಸರ್ಕಾರದ ಮೇಲೆ ನಿರ್ಬಂಧಗಳನ್ನು ವಿಧಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಫಲವಾಗಿದೆ" ಎಂದು ಸೋನಿಯಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ಇಸ್ರೇಲ್ ಅನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ತರಾಟೆಗೆ ತೆಗೆದುಕೊಳ್ಳುವ ದಿಟ್ಟ ಹೆಜ್ಜೆಯನ್ನು ತೆಗೆದುಕೊಂಡಿದೆ. ಬ್ರೆಝಿಲ್ ಈಗ ಈ ಪ್ರಯತ್ನದಲ್ಲಿ ಸೇರಿಕೊಂಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಫ್ರಾನ್ಸ್ ರಾಷ್ಟ್ರವು ಫೆಲೆಸ್ತೀನ್ ದೇಶವನ್ನು ಗುರುತಿಸಲು ನಿರ್ಧರಿಸಿದೆ. ಬ್ರಿಟನ್ ಮತ್ತು ಕೆನಡಾದಂತಹ ದೇಶಗಳು ಗಾಝಾದಲ್ಲಿ ಆಕ್ರಮಣವನ್ನು ಉತ್ತೇಜಿಸಿದ ಇಸ್ರೇಲ್ ನ ನಾಯಕರ ಮೇಲೆ ನಿರ್ಬಂಧಗಳನ್ನು ವಿಧಿಸಿವೆ ಎಂದು ಸೋನಿಯಾ ಗಾಂಧಿ ಹೇಳಿದರು.
ಇಸ್ರೇಲ್ ನೊಳಗೂ ಪ್ರತಿಭಟನೆಯ ಧ್ವನಿಗಳು ಮೊಳಗುತ್ತಿವೆ. “ ಮಾಜಿ ಪ್ರಧಾನಿಯೊಬ್ಬರು ಗಾಝಾದಲ್ಲಿ ಇಸ್ರೇಲಿ ಯುದ್ಧ ಅಪರಾಧಗಳ ವಾಸ್ತವತೆಯನ್ನು ಒಪ್ಪಿಕೊಂಡಿದ್ದಾರೆ" ಎಂದು ಕಾಂಗ್ರೆಸ್ ಮುಖ್ಯಸ್ಥೆ ಹೇಳಿದರು.
ಇತ್ತೀಚಿನ ಅಂಕಿಅಂಶಗಳನ್ನು ಉಲ್ಲೇಖಿಸಿದ ಸೋನಿಯಾ ಗಾಂಧಿ, “ಅಕ್ಟೋಬರ್ 2023 ರಿಂದ ಈವರೆಗೆ 17,000 ಮಕ್ಕಳನ್ನು ಒಳಗೊಂಡು 55,000 ಕ್ಕೂ ಹೆಚ್ಚು ಫೆಲೆಸ್ತೀನ್ ನಾಗರಿಕರು ಹತ್ಯೆಗೀಡಾಗಿದ್ದಾರೆ. ಇಸ್ರೇಲ್, ಮಾನವೀಯ ನೆರವಿನ ಬಗ್ಗೆ ವಿಶ್ವಸಂಸ್ಥೆ ಮಾಡಿರುವ ನಿರ್ಣಯಗಳನ್ನು ನಿರ್ಲಕ್ಷಿಸಿದೆ,” ಎಂದು ಆರೋಪಿಸಿದರು.
“ಈ ಮಾನವೀಯ ಬಿಕ್ಕಟ್ಟಿಗೆ ಮೂಕ ಪ್ರೇಕ್ಷಕನಾಗಿ ಉಳಿದಿರುವುದು ಭಾರತಕ್ಕೆ ಒಂದು ನಾಚಿಕೆಗೇಡಿನ ಸಂಗತಿ. ಇದು ನಮ್ಮ ರಾಷ್ಟ್ರದ ಆತ್ಮಸಾಕ್ಷಿಗೆ ಕಳಂಕವಷ್ಟೇ ಅಲ್ಲ, ಭವಿಷ್ಯದ ಪೀಳಿಗೆಗಳಿಗೆ ನೀಡುವ ಸಂದೇಶದಲ್ಲಿಯೂ ನಮ್ಮ ದೌರ್ಬಲ್ಯವನ್ನು ಎತ್ತಿ ತೋರಿಸಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜನವರಿ 26, 2024 ರಂದು ಅಂತರರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್ ಗೆ ನರಮೇಧದ ಕೃತ್ಯಗಳನ್ನು ತಡೆಗಟ್ಟಲು ಮತ್ತು ನಾಗರಿಕರಿಗೆ ಅಗತ್ಯ ಸೇವೆಗಳು ಮತ್ತು ಮಾನವೀಯ ನೆರವು ನೀಡಲು ನಿರ್ದೇಶಿಸುವ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದರು.
ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಇಸ್ರೇಲ್ ಪಾಲಿಸಿಲ್ಲ. ಅಮೆರಿಕದ ಬೆಂಬಲವೇ ಇಸ್ರೇಲಿನ ಈ ದೌರ್ಜನ್ಯಕ್ಕೆ ನೆರವಾಗುತ್ತಿದೆ ಎಂದು ಉಲ್ಲೇಖಿಸಿದ ಅವರು, "ಆಂತರರಾಷ್ಟ್ರೀಯ ಕಾನೂನುಗಳು ನಿಷ್ಕ್ರಿಯವಾಗಿರುವ ಈ ಸಂದರ್ಭದಲ್ಲಿ, ಇತರ ರಾಷ್ಟ್ರಗಳೂ ಮುಂದೆ ಬಂದು ನ್ಯಾಯಕ್ಕಾಗಿ ಹೋರಾಡಬೇಕು" ಎಂದು ಆಗ್ರಹಿಸಿದರು.
ಭಾರತವು ಯಾವಾಗಲೂ 'ಎರಡು ದೇಶ ಪರಿಹಾರ' ಮತ್ತು ಇಸ್ರೇಲ್ ಮತ್ತು ಫೆಲೆಸ್ತೀನ್ ಜನರ ನಡುವಿನ ನ್ಯಾಯಯುತ ಶಾಂತಿಗೆ ಬೆಂಬಲ ನೀಡುತ್ತಿದೆ ಎಂದು ಅವರು ಪ್ರತಿಪಾದಿಸಿದರು.
1974 ರಲ್ಲಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಭಾರತವು ಫೆಲೆಸ್ತೀನ್ ವಿಮೋಚನಾ ಸಂಸ್ಥೆಯನ್ನು ಅಧಿಕೃತವಾಗಿ ಗುರುತಿಸಿದ ಮೊದಲ ದೇಶಗಳಲ್ಲಿ ಒಂದು ಎಂಬ ಇತಿಹಾಸವನ್ನು ಉಲ್ಲೇಖಿಸಿದ ಅವರು, "ಈಗ ಭಾರತವು ತನ್ನ ಸ್ವಾಭಿಮಾನ ಹಾಗೂ ಮೌಲ್ಯಾಧಾರಿತ ತಾತ್ವಿಕತೆ ಪ್ರತಿಪಾದಿಸುವ ಸಮಯ ಬಂದಿದೆ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
1988 ರಲ್ಲಿ, ಫೆಲೆಸ್ತೀನ್ ದೇಶವನ್ನು ಅಧಿಕೃತವಾಗಿ ಗುರುತಿಸಿದ ಮೊದಲ ದೇಶಗಳಲ್ಲಿ ಭಾರತವೂ ಸೇರಿತ್ತು ಎಂದು ಅವರು ನೆನಪಿಸಿದ್ದಾರೆ.







