ಆಂಧ್ರಪ್ರದೇಶ: ಸಿಗಡಿ ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ: 107 ಕಾರ್ಮಿಕರು ಅಸ್ವಸ್ಥ

ವಿಜಯವಾಡ: ಅಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆ ನಿಜಾಮ್ ಪಟ್ಟಣದ ರಾಮಯ್ ಮೆರೈನ್ ಸಿಗಡಿ ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ ಉಂಟಾಗಿ ಕನಿಷ್ಠ 107 ಮಂದಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಬಹುತೇಕ ಎಲ್ಲ ಕಾರ್ಮಿಕರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ಕಂಪನಿಯ ಗೋಕರ್ಣಮಠ ಆವರಣದಲ್ಲಿ ಈ ದುರಂತ ಸಂಭವಿಸಿದ್ದು, ಈ ಕಾರ್ಮಿಕರು ಪ್ರಮಾದ ವಶಾತ್ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೋಡಿಯಂ ಹೈಪೋಕ್ಲೋರೇಟ್ ಜತೆ ಮಿಶ್ರ ಮಾಡಿದ್ದರಿಂದ ಈ ದುರಂತ ಸಂಭವಿಸಿದೆ. ಸಿಗಡಿ ಸಂಸ್ಕರಣೆ ವೇಳೆ ವಾಸನೆಯನ್ನು ತಟಸ್ಥಗೊಳಿಸುವ ಸಲುವಾಗಿ ಇದನ್ನು ಬಳಸಲಾಗುತ್ತದೆ. ಈ ಮಿಶ್ರಣವು ಪ್ರಬಲ ಕ್ಲೋರಿನ್ ಅನಿಲವನ್ನು ಬಿಡುಗಡೆ ಮಾಡಿದ್ದು, ಕಾರ್ಮಿಕರಿಗೆ ಉಸಿರಾಟದ ತೊಂದರೆ ಕಂಡುಬಂತು ಎಂದು ಹೇಳಲಾಗಿದೆ.
ಬಾಪಟ್ಲಾ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ವಿಜಯಮ್ಮ ಪ್ರಕಾರ, 30 ಮಂದಿ ಕಾರ್ಮಿಕರು ಕ್ಲೋರಿನ್ ಆಘ್ರಾಣಿಸಿದ ಲಕ್ಷಣದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋರಿಕೆ ಪ್ರದೇಶದಿಂದ ಇಂಥ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಇದೀಗ 107ಕ್ಕೆ ಏರಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದು ನಿರ್ಲಕ್ಷ್ಯದಿಂದ ಸಂಭವಿಸಿದ ಪ್ರಕರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





