ತಮಿಳುನಾಡು | ದಲಿತರು ಹಾಗೂ ಮುಸ್ಲಿಂ ಕೈದಿಗಳ ಹಕ್ಕು ನಿರಾಕರಿಸುತ್ತಿರುವ ಪೊಲೀಸರು, ಕೆಳ ನ್ಯಾಯಾಲಯಗಳು: ಬಂದೀಖಾನೆ ದತ್ತಾಂಶದಿಂದ ಬಹಿರಂಗ

ಸಾಂದರ್ಭಿಕ ಚಿತ್ರ | Photo Credit : freepik.com
ಹೊಸ ದಿಲ್ಲಿ: ದಲಿತರು ಹಾಗೂ ಮುಸ್ಲಿಂ ಸಮುದಾಯದ ವಿಚಾರಣಾಧೀನ ಕೈದಿಗಳು ಹಾಗೂ ಅಪರಾಧಿಗಳ ಹಕ್ಕನ್ನು ತಮಿಳುನಾಡಿನ ಪೊಲೀಸರು ಹಾಗೂ ಕೆಳ ಹಂತದ ನ್ಯಾಯಾಲಯಗಳು ನಿರಾಕರಿಸುತ್ತಿರುವ ಸಂಗತಿ ಇತ್ತೀಚೆಗೆ ಬಿಡುಗಡೆಯಾಗಿರುವ ಕೇಂದ್ರ ಸರಕಾರದ ಭಾರತೀಯ ಬಂಧೀಖಾನೆ ಅಂಕಿ-ಅಂಶಗಳು, 2023 ವರದಿಯಲ್ಲಿ ಬಹಿರಂಗಗೊಂಡಿದೆ ಎಂದು ತಮಿಳುನಾಡಿನ ವಿಲ್ಲುಪುರಂ ಸಂಸದ ಡಾ. ಡಿ.ರವಿಕುಮಾರ್ ಆರೋಪಿಸಿದ್ದಾರೆ.
2011ರ ಜನಗಣತಿ ಪ್ರಕಾರ, ತಮಿಳುನಾಡಿನ ಜನಸಂಖ್ಯೆಯ ಪೈಕಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ. 20ರಷ್ಟಿತ್ತು. ಹೀಗಿದ್ದೂ, ಶೇ. 31ರಷ್ಟು ಪರಿಶಿಷ್ಟ ಜಾತಿಯ ಆರೋಪಿಗಳು ಅಪರಾಧಿಗಳು ಹಾಗೂ ವಿಚಾರಣಾಧೀನ ಕೈದಿಗಳಾಗಿ ಬಂದೀಖಾನೆಯಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ತಮಿಳುನಾಡಿನ ಜನಸಂಖ್ಯೆಯಲ್ಲಿ ಕೇವಲ ಶೇ. 1ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯಿದ್ದರೂ, ಬಂದೀಖಾನೆಯಲ್ಲಿರುವ ಕೈದಿಗಳ ಸಂಖ್ಯೆಯ ಶೇ. 2-3ರಷ್ಟು ಕೈದಿಗಳು ಈ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದೇ ರೀತಿ, ತಮಿಳುನಾಡಿನ ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ. 5.8ರಷ್ಟಿದ್ದರೂ, ಅಪರಾಧಿಗಳು ಹಾಗೂ ವಿಚಾರಣಾಧೀನ ಕೈದಿಗಳ ಪ್ರಮಾಣ ಶೇ. 13ರಷ್ಟಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 6ರಷ್ಟಿರುವ ಕ್ರಿಶ್ಚಿಯನ್ನರ ಪೈಕಿ, ಕ್ರಮವಾಗಿ ಶೇ. 10ರಷ್ಟು ಅಪರಾಧಿಗಳು ಹಾಗೂ ಶೇ. 11.6ರಷ್ಟು ವಿಚಾರಣಾಧೀನ ಕೈದಿಗಳು ಬಂದೀಖಾನೆಯಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಅಂಕಿ-ಅಂಶಗಳು ಉತ್ತರ ಭಾರತದಲ್ಲಿ ಮಾತ್ರ ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಯಲಾಗಿದೆ ಎಂಬ ನಂಬಿಕೆಗೆ ವ್ಯತಿರಿಕ್ತವಾಗಿವೆ. ವಾಸ್ತವವಾಗಿ, ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ. 19ರಷ್ಟಿದ್ದು, ಶೇ. 26ರಷ್ಟು ಕೈದಿಗಳು ಬಂದೀಖಾನೆಯಲ್ಲಿದ್ದಾರೆ. ಬಿಹಾರದಲ್ಲಿ ಶೇ. 17ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಮರ ಪೈಕಿ, ಶೇ. 14ರಷ್ಟು ಕೈದಿಗಳು ಬಂದೀಖಾನೆಯಲ್ಲಿದ್ದಾರೆ. ಈ ಅಂಕಿ-ಅಂಶಗಳನ್ನು ತಮಿಳುನಾಡಿನೊಂದಿಗೆ ಹೋಲಿಸಿದರೆ, ಅನುಪಾತದ ಪ್ರಮಾಣ ಗಮನಾರ್ಹವಾಗಿ ಕೆಟ್ಟದಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಬಂದೀಖಾನೆಗಳಲ್ಲಿರುವ ಪರಿಶಿಷ್ಟ ಜಾತಿ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಕೈದಿಗಳ ಪ್ರಮಾಣ ಅಸಮತೋಲಿತವಾಗಿದ್ದು, ಇದು ಸುಸ್ಪಷ್ಟ ಸ್ವರೂಪವಾಗಿದೆ. ಬಂದೀಖಾನೆಯಲ್ಲಿರುವ ಅವರ ಸಂಖ್ಯೆಯ ಪ್ರಮಾಣ, ರಾಜ್ಯದ ಸಾಮಾನ್ಯ ಜನಸಂಖ್ಯೆಯಲ್ಲಿ ಅವರು ಹೊಂದಿರುವ ಪಾಲಿಗಿಂತ ಬಹುತೇಕ ದುಪ್ಪಟ್ಟಿದೆ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ.
ಈ ಸಂಗತಿಯು ತಮಿಳುನಾಡಿನ ಕಾನೂನು ಜಾರಿ ಪ್ರಾಧಿಕಾರಗಳು ಮತ್ತು ನ್ಯಾಯಾಂಗ ವ್ಯವಸ್ಥೆಗಳಲ್ಲಿ ಆಳವಾಗಿ ಬೇರೂರಿರುವ ಜಾತಿ ತಾರತಮ್ಯದತ್ತ ಬೊಟ್ಟು ಮಾಡುತ್ತಿದೆ. ಅದರಲ್ಲೂ, ಕೆಳಹಂತದ ನ್ಯಾಯಾಲಯಗಳು ರಿಮ್ಯಾಂಡ್ ವಿಚಾರಣೆಗಳನ್ನು ನಡೆಸುವಾಗ ತೋರಿಸುವ ಆಸಕ್ತಿ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ ಎಂದು ಅವರು ಹೇಳಿದ್ದಾರೆ.
ಬಂದೀಖಾನೆಯ ಕೋಣೆಗಳಲ್ಲಿ ಜಾತಿ ಆಧಾರಿತ ವಿಂಗಡನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತಮಿಳುನಾಡು ಬಂದೀಖಾನೆ ಕೈಪಿಡಿಯಲ್ಲಿ ತಾರತಮ್ಯಕರ ನಿರ್ದೇಶನಗಳಿರುವುದನ್ನು ಈಗಾಗಲೇ ಗಮನಿಸಿದೆ. ಈ ವ್ಯವಸ್ಥೆಯನ್ನು ಸುಧಾರಿಸಬೇಕಾದ ತುರ್ತು ಅಗತ್ಯದ ಕುರಿತು ನಾನು ಕಾನೂನು ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ ಕಾನೂನು ಜಾರಿಯ ಮೂಲ ವ್ಯವಸ್ಥೆಯಲ್ಲೇ ಜಾತಿ ಪಕ್ಷಪಾತ ಅಡಗಿದೆ ಎಂಬ ಭಾವನೆಯನ್ನು ಇತ್ತೀಚಿನ ವರದಿ ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಆಘಾತಕಾರಿ ಅಂಕಿ-ಅಂಶಗಳನ್ನು ಮುಖ್ಯಮಂತ್ರಿಗಳು ತುರ್ತಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು ಹಾಗೂ ಸರಿಪಡಿಸುವ ಕ್ರಮಕ್ಕೆ ಚಾಲನೆ ನೀಡಬೇಕು. ಬಂದೀಖಾನೆಗಳು ಜಾತೀಯ ಮತ್ತು ಮತೀಯ ತಾರತಮ್ಯದ ಸಾಂಸ್ಥಿಕ ಸ್ಥಳಗಳಾಗಲು ತಮಿಳುನಾಡು ಅವಕಾಶ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಸೌಜನ್ಯ: thenewminute.com







