ಜಾರ್ಖಂಡ್ | ಮತಾಂತರ ಆರೋಪದಲ್ಲಿ ಕ್ರೈಸ್ತ ಸಮುದಾಯದ ಭೋಜನ ಕೂಟದ ಮೇಲೆ ಗುಂಪು ದಾಳಿ
ಮತಾಂತರದ ಬಗ್ಗೆ ಪುರಾವೆ ಕಂಡು ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ ಪೊಲೀಸರು

ಸಾಂದರ್ಭಿಕ ಚಿತ್ರ
ಜೆಮ್ ಶೆಡ್ ಪುರ : ಜಾರ್ಖಂಡ್ನ ಜೆಮ್ ಶೆಡ್ ಪುರ ವಸತಿ ಸಮುಚ್ಛಯದಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಕ್ರೈಸ್ತ ಸಮುದಾಯದ ಭೋಜನ ಕೂಟದ ಮೇಲೆ 100ಕ್ಕೂ ಅಧಿಕ ಜನರು ಪೊಲೀಸರೊಂದಿಗೆ ಎರಡು ಫ್ಲಾಟ್ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಈ ಕುರಿತು ತನಿಖೆ ನಡೆಸಿದ ಪೊಲೀಸರು ಮತಾಂತರದ ಯಾವುದೇ ಪುರಾವೆಗಳು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜುಲೈ 26ರಂದು ಗೋಲ್ಮುರಿ ಪೊಲೀಸ್ ಠಾಣಾ ವ್ಯಾಪ್ತಿಯ ಜೆಮ್ ಶೆಡ್ ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 21 ದಿನಗಳ ಉಪವಾಸ ವೃತದ ಕೊನೆಗೆ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಭೋಜನ ಕೂಟ ಏರ್ಪಡಿಸಿದ್ದರು. ಎರಡು ಫ್ಲಾಟ್ ಗಳಲ್ಲಿ 50ಕ್ಕೂ ಅಧಿಕ ಜನರು ಸೇರಿದ್ದರು. ಈ ಬಗ್ಗೆ ವಸತಿ ಸಮುಚ್ಛಯದ ಕೆಲವು ನಿವಾಸಿಗಳು ಅನುಮಾನ ವ್ಯಕ್ತಪಡಿಸಿದ್ದರು.
ಗೋವಿಂದಪುರದ ಸ್ಥಳೀಯ ಚರ್ಚ್ ಪಾದ್ರಿ ಜಿತು ಲಿಮಾ ಈ ಕುರಿತು ಪ್ರತಿಕ್ರಿಯಿಸಿ, ಎರಡು ಫ್ಲಾಟ್ ಗಳಲ್ಲಿ ಒಟ್ಟು 40 ರಿಂದ 50 ಜನರಿದ್ದರು. ಅವರಲ್ಲಿ ಹೆಚ್ಚಿನವರು ಇತರ ರಾಜ್ಯಗಳಿಂದ ಬಂದ ಸಂಬಂಧಿಕರು ಮತ್ತು ಪರಿಚಯಸ್ಥರಾಗಿದ್ದರು. ಆ ಸಮಯದಲ್ಲಿ ಯಾವುದೇ ಪ್ರಾರ್ಥನಾ ಸಭೆ ಅಥವಾ ಧಾರ್ಮಿಕ ಚಟುವಟಿಕೆ ನಡೆಯುತ್ತಿರಲಿಲ್ಲ. ಫ್ಲಾಟ್ ಗಳನ್ನು ವಾಸಿಸಲು ಮಾತ್ರ ಬಳಸಲಾಗುತ್ತಿತ್ತು. ವೃದ್ಧರು ಮತ್ತು ಮಕ್ಕಳು ಸೇರಿದಂತೆ ಹೆಚ್ಚಿನ ಜನರು ಜಮಾಯಿಸಿದ್ದರು. ಇದ್ದಕ್ಕಿದ್ದಂತೆ ಪೊಲೀಸರೊಂದಿಗೆ ಗುಂಪೊಂದು ಫ್ಲಾಟ್ ಗಳಿಗೆ ಪ್ರವೇಶಿಸಿ ಅಲ್ಲಿದ್ದ ಜನರನ್ನು ಪ್ರಶ್ನಿಸಲು ಪ್ರಾರಂಭಿಸಿತು. ಸುಮಾರು ಮೂರು ಗಂಟೆಗಳ ವಿಚಾರಣೆಯ ನಂತರ ಅವರು ಆರು ಜನರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ಹೇಳಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಚರ್ಚ್ ಸದಸ್ಯರೊಬ್ಬರು, ಗುಂಪು ಕಿರುಕುಳ ನೀಡಿದೆ ಮತ್ತು ಕೆಲವು ಜನರನ್ನು ಗೋಲ್ಮುರಿ ಪೊಲೀಸ್ ಠಾಣೆಗೆ ಕರೆದೊಯ್ದ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಜನರು ಭೋಜನ ಕೂಟ ನಡೆಯುತ್ತಿದ್ದ ಕೊಠಡಿಗೆ ನುಗ್ಗಿ ಬೀಗ ಹಾಕಿದರು, ಯಾರು ಕೂಡ ಹೊರ ಹೋಗಬಾರದು ಎಂದು ಸೂಚಿಸಿದರು. ಒಳಗೆ ನುಗ್ಗಿದ ಗುಂಪಿನಲ್ಲಿ 100ಕ್ಕೂ ಹೆಚ್ಚು ಜನರಿದ್ದರು. ಕೆಲವು ಪೊಲೀಸ್ ಸಿಬ್ಬಂದಿ ಸಾಮಾನ್ಯ ಉಡುಪಿನಲ್ಲಿದ್ದರು. ಆದ್ದರಿಂದ ಯಾರು ಪೊಲೀಸರು ಮತ್ತು ಯಾರು ಗುಂಪಿನ ಭಾಗವಾಗಿದ್ದರು ಎಂದು ಗುರುತಿಸುವುದು ಕಷ್ಟಕರವಾಗಿತ್ತು ಎಂದು ಹೇಳಿದರು.
ಗೋಲ್ಮುರಿ ಠಾಣೆಯ ಎಸ್ಎಚ್ಒ ರಾಜೇಂದ್ರ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ಯಾರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದಿಲ್ಲ. ನಾನು ಅವರೊಂದಿಗೆ ಗೌರವದಿಂದ ನಡೆದುಕೊಂಡಿದ್ದೇನೆ. ನಾನು ಹೊರಗೆ ಹೋದಾಗ, ಅವರ ಮೇಲೆ ಹಲ್ಲೆ ನಡೆದಿರಬಹುದು. ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಆದರೆ, ಮತಾಂತರ ಆರೋಪಕ್ಕೆ ಸಂಬಂಧಿಸಿ ತಕ್ಷಣಕ್ಕೆ ಯಾವುದೇ ಪುರಾವೆಗಳು ಸಿಗಲಿಲ್ಲ ಎಂದು ಹೇಳಿದರು.







