ಪೊಲೀಸರು Z+ ಭದ್ರತೆ ನೀಡಿದ್ದಾರೆ!: ದಿಲ್ಲಿ ಪೊಲೀಸರ ಕಣ್ಗಾವಲು ಕುರಿತು ಧ್ರುವ್ ರಾಠಿ ವ್ಯಂಗ್ಯ
‘ದಿಲ್ಲಿ ಪೊಲೀಸರೇ, ನೀವು ಕ್ಯಾಮೆರಾದಲ್ಲಿದ್ದೀರಿ’ ಎಂದು ವಿಡಿಯೊ ಪೋಸ್ಟ್ ಮಾಡಿದ ಯೂಟ್ಯೂಬರ್

ಧ್ರುವ್ ರಾಠಿ | Photo Credit : facebook
ಹೊಸದಿಲ್ಲಿ: ತಮ್ಮ ಕಾರನ್ನು ದಿಲ್ಲಿ ಪೊಲೀಸರು ಹಿಂಬಾಲಿಸುತ್ತಿದ್ದಾರೆ ಎಂದು ಯೂಟ್ಯೂಬರ್ ಧ್ರುವ್ ರಾಠಿ ವ್ಯಂಗ್ಯವಾಡಿದ್ದಾರೆ. ಸ್ಕಾರ್ಪಿಯೋ ಮತ್ತು ಬಿಳಿ ಕಾರು ತಮ್ಮ ವಾಹನವನ್ನು ಹಿಂಬಾಲಿಸುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಿರುವ ಅವರು, ಪೊಲೀಸರು ತಮಗೆ Z+ ಭದ್ರತೆ ಒದಗಿಸಿದಂತಿದೆ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
‘ಸ್ನೇಹಿತರೇ, ನಾನು ಈಗಷ್ಟೇ ಮನೆಯಿಂದ ಹೊರಟು ಕಾರು ಓಡಿಸುತ್ತಿದ್ದೇನೆ. ನನ್ನನ್ನು ಎಷ್ಟು ಹತ್ತಿರದಿಂದ ಹಿಂಬಾಲಿಸಲಾಗುತ್ತಿದೆ ಎಂಬುದನ್ನು ನಿಮಗೆ ತೋರಿಸಲು ಬಯಸುತ್ತೇನೆ. ನನ್ನನ್ನು ಹಿಂಬಾಲಿಸಲು ಎಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ನೋಡಿ’ ಎಂದು ಧ್ರುವ್ ರಾಠಿ ವಿಡಿಯೊದಲ್ಲಿ ಹೇಳಿದ್ದಾರೆ.
ಒಂದು ಸ್ಕಾರ್ಪಿಯೋ ಕಾರು ಬಹಳ ಹೊತ್ತಿನಿಂದ ತಮ್ಮ ಕಾರನ್ನು ಹಿಂಬಾಲಿಸುತ್ತಿದೆ. ಅದರ ಹಿಂದೆ ಮತ್ತೊಂದು ಬಿಳಿ ಕಾರು ಕೂಡ ಇದೆ ಎಂದು ಅವರು ವಿಡಿಯೊದಲ್ಲಿ ತೋರಿಸಿದ್ದಾರೆ. ‘ಅವರು ಬಹಳ ಸಮಯದಿಂದ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ. ನಮ್ಮನ್ನು ಸುಮ್ಮನೆ ಬಿಡುತ್ತಲೇ ಇಲ್ಲ’ ಎಂದು ಹೇಳಿದ್ದಾರೆ.
ತಮ್ಮನ್ನು ಹಿಂಬಾಲಿಸುತ್ತಿದ್ದ ವಾಹನದ ನೋಂದಣಿ ಸಂಖ್ಯೆಯನ್ನು ಕ್ಯಾಮೆರಾದಲ್ಲಿ ತೋರಿಸಿದ ಅವರು, ‘ದಿಲ್ಲಿ ಪೊಲೀಸರೇ, ನೀವು ಕ್ಯಾಮೆರಾದಲ್ಲಿದ್ದೀರಿ’ ಎಂದು ವ್ಯಂಗ್ಯವಾಡಿದ್ದಾರೆ.
ಬಳಿಕ, ತಮ್ಮನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬರ ಕಾರಿನ ಸಮೀಪಕ್ಕೆ ತೆರಳಿ, ‘ನನ್ನನ್ನು ಹಿಂಬಾಲಿಸುತ್ತಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಮತ್ತು ಗುಪ್ತಚರ ಇಲಾಖೆಯ (IB) ಸಿಬ್ಬಂದಿ ತಮ್ಮನ್ನು ಯಾವುದೋ ದೊಡ್ಡ ಅಪರಾಧಿಯಂತೆ ಹಿಂಬಾಲಿಸುತ್ತಿರುವುದನ್ನು ನೋಡುವುದೇ ಖುಷಿ ಕೊಡುತ್ತದೆ ಎಂದು ಹೇಳಿದ್ದಾರೆ.
ತಾವು ಯು-ಟರ್ನ್ ತೆಗೆದುಕೊಂಡ ಬಳಿಕವೂ ವಾಹನಗಳು ತಮ್ಮನ್ನು ಹಿಂಬಾಲಿಸುತ್ತಿವೆಯೇ ಎಂಬುದನ್ನು ಗಮನಿಸಿರುವುದಾಗಿ ಧ್ರುವ್ ರಾಠಿ ತಿಳಿಸಿದ್ದಾರೆ. ‘ನನ್ನನ್ನು ಹಿಂಬಾಲಿಸುತ್ತಿರುವುದು 20, 50 ಅಥವಾ 100 ಜನರ ತಂಡವೇ? ಅಥವಾ ಕೇವಲ ಒಬ್ಬ ವ್ಯಕ್ತಿಯೇ?’ ಎಂದು ಪ್ರಶ್ನಿಸಿದ್ದಾರೆ.






