ಕ್ರಮ ಕೈಗೊಳ್ಳದ ಪೊಲೀಸರು ಬಾಲಕಿಯ ವಯಸ್ಸಿನ ದೃಢೀಕರಣ ಪತ್ರ ಕೇಳಿದರು: ಅತ್ಯಾಚಾರಕ್ಕೀಡಾಗಿ, ಹತ್ಯೆಗೊಳಗಾದ ಬಾಲಕಿಯ ಪೋಷಕರ ಆರೋಪ

ಭಿಲ್ವಾರಾ (ರಾಜಸ್ಥಾನ): ಸಾಮೂಹಿಕ ಅತ್ಯಾಚಾರಕ್ಕೀಡಾಗಿ, ನಂತರ ಹತ್ಯೆಗೀಡಾಗಿರುವ ಬಾಲಕಿಯ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಲಿಲ್ಲ ಎಂದು ಸಂತ್ರಸ್ತ ಬಾಲಕಿಯ ಪೋಷಕರು ಆರೋಪಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಈ ಕುರಿತು The Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯತಿ ಸದಸ್ಯರೂ ಆದ ಸಂತ್ರಸ್ತ ಬಾಲಕಿಯ ಚಿಕ್ಕಪ್ಪ, "ಒಂದು ವೇಳೆ ಪೊಲೀಸರು ಬಾಲಕಿ ನಾಪತ್ತೆಯಾಗಿರುವ ಮಾಹಿತಿಯನ್ನು ತಿಳಿದ ಕೂಡಲೇ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿದ್ದರೆ ಆಕೆ ಜೀವಂತವಾಗಿ ಉಳಿದಿರುತ್ತಿದ್ದಳು ಅಥವಾ ಆಕೆಯ ಅಂತ್ಯಕ್ರಿಯೆ ನೆರವೇರಿಸಲು ಆಕೆಯ ದೇಹವಾದರೂ ನಮಗೆ ದೊರೆಯುತ್ತಿತ್ತು" ಎಂದು ಅಳಲು ತೋಡಿಕೊಂಡಿದ್ದಾರೆ.
ಅಲೆಮಾರಿಗಳು ನಿರ್ಮಿಸಿರುವ ಕುಲುಮೆ ಇರುವ ಬಯಲಿಗೆ ಬಾಲಕಿಯು ನಿತ್ಯ ಮೇಕೆಗಳನ್ನು ಮೇಯಿಸಲು ಹೋಗುತ್ತಿದ್ದಳು ಎಂದೂ ಅವರು ತಿಳಿಸಿದ್ದಾರೆ.
ಘಟನೆಯ ದಿನ ಬಾಲಕಿ ಹಾಗೂ ಆಕೆಯ ತಾಯಿ ಮೇಕೆಗಳನ್ನು ಮೇಯಿಸಲು ಬಯಲಿಗೆ ತೆರಳಿದ್ದಳು. ಮಧ್ಯಾಹ್ನ ಆಕೆಯ ತಾಯಿಯು ಅಲ್ಲೇ ಹತ್ತಿರದಲ್ಲಿದ್ದ ತನ್ನ ಪೋಷಕರ ಮನೆಗೆ ತೆರಳಿದ್ದಾಳೆ. ಆಕೆ ಅಲ್ಲಿಂದ ಮರಳಿ ಬಂದಾಗ ಬಾಲಕಿಯು ಕಂಡು ಬಂದಿಲ್ಲ ಮತ್ತು ಆಕೆಗಾಗಿ ಹುಡುಕಾಟ ನಡೆಸಿದ್ದಾಳೆ. ತನ್ನ ಪುತ್ರಿಯ ಕುರಿತು ಬಯಲಿನಲ್ಲಿದ್ದ ಅಲೆಮಾರಿಗಳನ್ನು ಆಕೆ ಪ್ರಶ್ನಿಸಿದ್ದಾಳಾದರೂ, ಅವರು ಆಕೆಗೆ ಸಮಾಧಾನಕರ ಉತ್ತರ ನೀಡಿಲ್ಲ. ನಂತರ ತನ್ನ ಪುತ್ರಿ ಮನೆಗೆ ಮರಳಿರಬಹುದು ಎಂಬ ವಿಶ್ವಾಸದಲ್ಲಿ ಆಕೆಯೂ ಮನೆಯತ್ತ ತೆರಳಿದ್ದಾಳೆ. ಆದರೆ, ಸಂಜೆಯಾದರೂ ಬಾಲಕಿಯು ಮನೆಗೆ ಮರಳದಿರುವುದನ್ನು ಕಂಡು ಕುಟುಂಬವು ಗಾಬರಿಗೊಳಗಾಗಿದೆ ಹಾಗೂ ಆಕೆಯ ಚಿಕ್ಕಪ್ಪ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸುವಂತೆ ಬಾಲಕಿಯ ಅಣ್ಣ (ಚಿಕ್ಕಪ್ಪನ ಪುತ್ರ)ನನ್ನು ಕಳಿಸಿದ್ದಾರೆ.
ಆ ಸಂದರ್ಭದಲ್ಲಿ ಪೊಲೀಸರು ತೋರಿರುವ ಪ್ರತಿಕ್ರಿಯೆಯೀಗ ಬಾಲಕಿಯ ಕುಟುಂಬದ ಸದಸ್ಯರು ಹಾಗೂ ಪ್ರತಿಭಟನಾಕಾರರಿಂದ ತೀವ್ರ ಟೀಕೆಗೊಳಗಾಗಿದೆ.
ಇದಕ್ಕೂ ಮುನ್ನ, ಆಗಸ್ಟ್ 2ರಂದು ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ದುಷ್ಕರ್ಮಿಗಳ ಗುಂಪೊಂದು, ನಂತರ ಆಕೆಯನ್ನು ಕುಲುಮೆಯಲ್ಲಿ ಜೀವಂತವಾಗಿ ದಹಿಸಿತ್ತು. ಈ ಘಟನೆಯ ವಿರುದ್ಧ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.







