ರಾಜ್ಯಸಭೆ ಚುನಾವಣೆ ಪ್ರಕ್ರಿಯೆಯ ಮೇಲೆ ಬಿಜೆಪಿಯಿಂದ ಹಸ್ತಕ್ಷೇಪ: ನಾಮಪತ್ರ ತಿರಸ್ಕಾರದ ಬಗ್ಗೆ ಮೀನಾಕ್ಷಿ ನಟರಾಜನ್ ಪ್ರತಿಕ್ರಿಯೆ

ಮೀನಾಕ್ಷಿ ನಟರಾಜನ್ (Photo: PTI)
ಹೊಸದಿಲ್ಲಿ: ರಾಜ್ಯಸಭೆ ಚುನಾವಣೆ ನಾಮಪತ್ರ ತಿರಸ್ಕೃತಗೊಂಡ ಬೆನ್ನಲ್ಲೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್, ಮಧ್ಯ ಪ್ರದೇಶದಲ್ಲಿ ರಾಜ್ಯಸಭಾ ಚುನಾವಣಾ ಪ್ರಕ್ರಿಯೆಯ ಮೇಲೆ ಬಿಜೆಪಿ ಹಸ್ತಕ್ಷೇಪ ನಡೆಸಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮೀನಾಕ್ಷಿ ನಟರಾಜನ್, "ಮಧ್ಯಪ್ರದೇಶ ವಿಧಾನಸಭೆಯಲ್ಲಿ ಅಗತ್ಯ ಸಂಖ್ಯಾಬಲವಿಲ್ಲದಿದ್ದರೂ ಬಿಜೆಪಿ ಮೂರನೇ ರಾಜ್ಯಸಭಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆ ಬಳಿಕ ವಿವಾದ ಪ್ರಾರಂಭವಾಗಿದೆ. ಆಡಳಿತ ಪಕ್ಷವು ಆರಂಭದಲ್ಲಿ ಅಡ್ಡ ಮತದಾನ ಮತ್ತು ಪಕ್ಷಾಂತರಗಳ ಮೂಲಕ ಗೆಲುವು ಸಾಧಿಸುವ ಆಶಯವನ್ನು ಹೊಂದಿತ್ತು. ಆದರೆ ಇಡೀ ಕಾಂಗ್ರೆಸ್ ಶಾಸಕಾಂಗ ಪಕ್ಷವು ಒಗ್ಗಟ್ಟಾಗಿರುವುದನ್ನು ಮತ್ತು ಎಲ್ಲಾ ಶಾಸಕರು ಒಟ್ಟಾಗಿ ನಿಂತಿರುವುದನ್ನು ಗಮನಿಸಿದ ಬಿಜೆಪಿ ನಮ್ಮನ್ನು ಎದುರಿಸಲು ಒಂದು ಕಟ್ಟುಕಥೆಯನ್ನು ರೂಪಿಸಿದೆ" ಎಂದು ಹೇಳಿದರು.
ನನ್ನ ವಿರುದ್ಧದ ಎತ್ತಿರುವ ವಿಷಯವು ಕೇವಲ ಕಾನೂನು ನೋಟಿಸ್ ಆಗಿದೆಯೇ ಹೊರತು ಕ್ರಿಮಿನಲ್ ಪ್ರಕರಣವಲ್ಲ. ಈ ದೂರನ್ನು ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಂಡಿಲ್ಲ ಮತ್ತು ಯಾವುದೇ ಔಪಚಾರಿಕ ಪ್ರಕರಣವನ್ನು ದಾಖಲಿಸಿಲ್ಲ. ಆದ್ದರಿಂದ ಅಫಿಡವಿಟ್ನಲ್ಲಿ ಅಂತಹ ಸೂಚನೆಯನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಹೇಳಿದರು.
ನ್ಯಾಯಾಲಯ ಕ್ರಿಮಿನಲ್ ಮೊಕದ್ದಮೆ ಅಥವಾ ನನ್ನ ವಿರುದ್ಧ ಆರೋಪಗಳನ್ನು ಹೊರಿಸಿದ್ದರೆ, ಮಾಹಿತಿಯನ್ನು ಮರೆಮಾಚಲಾಗಿದೆ ಎಂದು ಹೇಳುವುದು ನ್ಯಾಯೋಚಿತವಾಗಿದೆ. ಆದರೆ ಯಾವುದೇ ಪ್ರಕರಣ ಅಸ್ತಿತ್ವದಲ್ಲಿಲ್ಲದಿರುವಾಗ, ನಾನು ಪ್ರಕರಣವನ್ನು ಮುಚ್ಚಿಟ್ಟಿದ್ದೇನೆ ಎಂದು ಹೇಳುವುದು ಹೇಗೆ ಎಂದು ನಟರಾಜನ್ ಪ್ರಶ್ನಿಸಿದರು.
ನನ್ನ ಪರವಾದ ವಾದಗಳನ್ನು ಚುನಾವಣಾಧಿಕಾರಿಯು ಅಂತಿಮ ಆದೇಶದಲ್ಲಿ ಪರಿಗಣಿಸಿಲ್ಲ. ಈ ಘಟನೆ ರಾಜಕೀಯ ಪ್ರೇರಿತ ಕ್ರಮ, ನಾವು ಸೋತದ್ದು ಕಾನೂನು ಹೋರಾಟದಲ್ಲಿ ಅಲ್ಲ. ರಾಜಕೀಯ ಇಚ್ಛಾಶಕ್ತಿಯ ವಿರುದ್ಧ ನಡೆದ ಹೋರಾಟದಲ್ಲಿ ಎಂದು ಮೀನಾಕ್ಷಿ ನಟರಾಜನ್ ಹೇಳಿದರು.






