ರಾಜಕೀಯ ಪಕ್ಷಗಳ ನೋಂದಣಿ ಪ್ರಕ್ರಿಯೆ ಇನ್ನು ಕಠಿಣ

LOGO'S
ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗವು, 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ 29ಎ ಪರಿಚ್ಛೇದದಡಿ ಹೊಸ ರಾಜಕೀಯ ಪಕ್ಷಗಳ ನೋಂದಣಿ ಪ್ರಕ್ರಿಯೆಯನ್ನು ಕಠಿಣಗೊಳಿಸಿದೆ. ಅಸ್ತಿತ್ವದಲ್ಲಿಲ್ಲದ ಅಥವಾ ನಕಲಿ ರಾಜಕೀಯ ಪಕ್ಷಗಳ ಗುರುತಿಸಿ ತೆಗೆದುಹಾಕುವ ಮೂಲಕ ಚುನಾವಣಾ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಚುನಾವಣಾ ಆಯೋಗ ಮಾಡುತ್ತಿರುವ ಪ್ರಯತ್ನಗಳ ಭಾಗವಾಗಿ ಈ ಸುಧಾರಣೆಯನ್ನು ಮಾಡಲಾಗಿದೆ.
ಈ ಕಾನೂನಿನಡಿ ರಾಷ್ಟ್ರೀಯ, ರಾಜ್ಯ ಅಥವಾ ನೋಂದಾಯಿತ ಮಾನ್ಯತೆ ರಹಿತ ರಾಜಕೀಯ ಪಕ್ಷಗಳು ಸೇರಿದಂತೆ ಭಾರತದ ರಾಜಕೀಯ ಪಕ್ಷಗಳು ತಮ್ಮ ಹೆಸರುಗಳನ್ನು ಚುನಾವಣಾ ಆಯೋಗದಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ಹಲವು ‘ನೋಂದಾಯಿತ ಮಾನ್ಯತೆರಹಿತ ರಾಜಕೀಯ ಪಕ್ಷಗಳು’ ಅಸ್ತಿತ್ವದಲ್ಲೇ ಇಲ್ಲ ಅಥವಾ ಈಗ ಸಕ್ರಿಯವಾಗಿಲ್ಲ ಎನ್ನುವುದು ಇತ್ತೀಚಿನ ಪರಿಶೋಧನೆಗಳಿಂದ ತಿಳಿದುಬಂದಿದೆ ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.
476 ‘ನೋಂದಾಯಿತ ಮಾನ್ಯತೆರಹಿತ ರಾಜಕೀಯ ಪಕ್ಷಗಳ’ ಮಾನ್ಯತೆಯನ್ನು ತೆಗೆದುಹಾಕಲು ಪರಿಶೀಲಿಸಲಾಗುತ್ತಿದೆ ಎಂಬುದಾಗಿ ಆಗಸ್ಟ್ 11ರಂದು ಚುನಾವಣಾ ಆಯೋಗವು ಘೋಷಿಸಿತ್ತು. ಈ ಪಕ್ಷಗಳ ಬಗ್ಗೆ ತನಿಖೆ ನಡೆಸಿ ಶೋಕಾಸ್ ನೋಟಿಸ್ಗಳನ್ನು ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಆಯೋಗವು ನಿರ್ದೇಶನ ನೀಡಿತ್ತು.





