ಅಮೆರಿಕಕ್ಕೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿದ ಅಂಚೆ ಇಲಾಖೆ

ಹೊಸದಿಲ್ಲಿ, ಆ. 30: ಪಾರ್ಸೆಲ್ ಸೇವೆಗಳನ್ನು ಸ್ಥಗಿತಗೊಳಿಸಿದ ಕೆಲವೇ ದಿನಗಳ ಬಳಿಕ, 100 ಡಾಲರ್ (ಸುಮಾರು 8,800 ರೂಪಾಯಿ) ವರೆಗಿನ ಮೌಲ್ಯದ ಪತ್ರಗಳು, ದಾಖಲೆಗಳು ಮತ್ತು ಉಡುಗೊರೆ ವಸ್ತುಗಳು ಸೇರಿದಂತೆ ಅಮೆರಿಕಕ್ಕೆ ಸಂಬಂಧಿಸಿದ ಎಲ್ಲಾ ವಿಧಗಳ ಅಂಚೆ ಸೇವೆಗಳನ್ನು ಭಾರತೀಯ ಅಂಚೆ ಇಲಾಖೆಯು ನಿಲ್ಲಿಸಿದೆ.
ಭಾರತೀಯ ಸರಕುಗಳಿಗೆ ಅಮೆರಿಕ ವಿಧಿಸಿರುವ ಹೆಚ್ಚುವರಿ ಸುಂಕಗಳ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಅಂಚೆ ಇಲಾಖೆ ಈ ಕ್ರಮ ತೆಗೆದುಕೊಂಡಿದೆ.
ಅಮೆರಿಕಕ್ಕೆ ಹೋಗುವ ಅಂಚೆಗಳನ್ನು ಸಾಗಿಸಲು ವಿಮಾನಯಾನ ಸಂಸ್ಥೆಗಳು ಹಿಂದೆ ಸರಿದಿರುವುದು ಮತ್ತು ಸ್ಪಷ್ಟ ನಿಯಂತ್ರಣ ವ್ಯವಸ್ಥೆಯೊಂದರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ, ಅಮೆರಿಕಕ್ಕೆ ಹೋಗುವ ಎಲ್ಲ ಮಾದರಿಯ ಅಂಚೆಗಳನ್ನು ಸ್ಥಗಿತಗೊಳಿಸಲು ಅಂಚೆ ಇಲಾಖೆಯು ನಿರ್ಧರಿಸಿದೆ ಎಂಬುದಾಗಿ ಶುಕ್ರವಾರ ಹೊರಡಿಸಲಾದ ಸೂಚನೆಯೊಂದರಲ್ಲಿ ಅದು ತಿಳಿಸಿದೆ.
‘‘ಇಲಾಖೆಯು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ ಹಾಗೂ ಸೇವೆಗಳನ್ನು ಸಾಧ್ಯವಾದಷ್ಟು ಬೇಗ ಪುನರಾರಂಭಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಯಾವುದೇ ವಸ್ತುವನ್ನು ನೋಂದಾಯಿಸಿದ್ದು ಅದನ್ನು ಕಳುಹಿಸಲು ಸಾಧ್ಯವಾಗದೇ ಹೋಗಿದ್ದರೆ ಅದರ ಅಂಚೆ ವೆಚ್ಚವನ್ನು ವಾಪಸ್ ಕೇಳಬಹುದಾಗಿದೆ’’ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.





