ನಿಷೇಧದ ಅಂಚಿನಲ್ಲಿ ಪೌರುಷ್ ಶರ್ಮರ ಯೂಟ್ಯೂಬ್ ಚಾನೆಲ್!
ಸುದ್ದಿ ಸಂಸ್ಥೆಯೊಂದು ʼಹಕ್ಕುಸ್ವಾಮ್ಯ ಉಲ್ಲಂಘನೆ ನಿಯಮʼದ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ ಯೂಟ್ಯೂಬರ್

ಪೌರುಷ್ ಶರ್ಮ | PC : @psunfiltered/YouTube
ಹೊಸ ದಿಲ್ಲಿ: ಸುಮಾರು 1.5 ದಶಲಕ್ಷ ಚಂದಾದಾರರನ್ನು ಹೊಂದಿರುವ ಜನಪ್ರಿಯ ಯೂಟ್ಯೂಬರ್ ಪೌರುಷ್ ಶರ್ಮರ ಯೂಟ್ಯೂಬ್ ವಾಹಿನಿ ಇನ್ನೇನು ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ. ತಮ್ಮ ವ್ಯಂಗ್ಯಭರಿತ ಹಾಗೂ ಸುದ್ದಿ ಆಧಾರಿತ ವಿಡಿಯೊಗಳಿಂದ ಭಾರಿ ಖ್ಯಾತರಾಗಿರುವ ಪೌರುಷ್ ಶರ್ಮ ಈ ಆಘಾತಕಾರಿ ಸುದ್ದಿಯನ್ನು ವಿಡಿಯೊವೊಂದರ ಮೂಲಕ ಹಂಚಿಕೊಂಡಿದ್ದಾರೆ.
ʼನಾನೆಂದೂ ಇಂತಹ ನೋವಿನ ವಿಡಿಯೊವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಭಾವಿಸಿರಲಿಲ್ಲ. ಆದರೆ, ಎರಡು ದಿನಗಳ ಹಿಂದೆ ನಿಮ್ಮ ವಾಹಿನಿಯ ವಿರುದ್ಧ ವಿವಿಧ ಹಕ್ಕುಸ್ವಾಮ್ಯ ಉಲ್ಲಂಘನೆ ನೋಟಿಸ್ ಗಳಿರುವುದರಿಂದ, ನಿಮ್ಮ ವಾಹಿನಿಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ಯೂಟ್ಯೂಬ್ ನಿಂದ ಇಮೇಲ್ ಸ್ವೀಕರಿಸಿದ ನಂತರವಷ್ಟೆ ನನಗೆ ಈ ಸಂಗತಿ ತಿಳಿಯಿತು. ಆದರೆ, ಈ ಹಕ್ಕುಸ್ವಾಮ್ಯ ಉಲ್ಲಂಘನೆ ನೋಟಿಸ್ ಗಳು ಬಿಡಿಬಿಡಿ ವ್ಯಕ್ತಿಗಳಿಂದ ಜಾರಿಯಾಗಿರುವುದಲ್ಲ. ಬದಲಿಗೆ, ಏಕೈಕ ಸುದ್ದಿ ಸಂಸ್ಥೆಯೊಂದರಿಂದ ಆಗಿರುವುದು. ಈ ಸುದ್ದಿ ಸಂಸ್ಥೆಯು ಪದೇ ಪದೇ ನನ್ನ ವಿಡಿಯೊಗಳ ಮೇಲೆ ಹಕ್ಕು ಪ್ರತಿಪಾದಿಸಿದೆ. ಆದರೆ, ತಪ್ಪು ಮಾಹಿತಿಗಳನ್ನು ಬಯಲು ಮಾಡಲು ಅಥವಾ ಸತ್ಯದ ಮೇಲೆ ಬೆಳಕು ಚೆಲ್ಲಲು ಸಾರ್ವಜನಿಕವಾಗಿ ಲಭ್ಯವಿರುವ ವಿಡಿಯೊ ತುಣುಕುಗಳನ್ನು ನನ್ನ ವಿಡಿಯೊ ತುಣುಕುಗಳು ಬಳಸಿಕೊಳ್ಳುತ್ತವೆ. ಸಾಮಾನ್ಯವಾಗಿ ಇಂತಹ ವಿಡಿಯೊ ತುಣುಕುಗಳು ನ್ಯಾಯಯುತ ಬಳಕೆಯ ವ್ಯಾಪ್ತಿಯಡಿ ಬರುತ್ತವೆ ಹಾಗೂ ವಿಶೇಷವಾಗಿ, ಸುದ್ದಿಗಳು ಹಾಗೂ ವಿಡಂಬನೆಯಡಿ ಬರುತ್ತವೆ” ಎಂದು ಪೌರುಷ್ ಶರ್ಮ ಅಳಲು ತೋಡಿಕೊಂಡಿದ್ದಾರೆ.
ಯೂಟ್ಯೂಬ್ ನ ಈ ನೋಟಿಸ್ ನಿಂದ ತನ್ನ ಮೇಲೆ ಆಗಿರುವ ಪರಿಣಾಮದ ಕುರಿತು ಹೇಳಿಕೊಂಡಿರುವ ಪೌರುಷ್ ಶರ್ಮ, “ಏನಾಗುತ್ತಿದೆ ಎಂದು ಅರಿಯಲು ನನಗೆ ಎರಡು ದಿನಗಳ ಕಾಲ ಬೇಕಾಯಿತು. ನಾನು ಈ ವಾಹಿನಿಗಾಗಿ ಏಳು ವರ್ಷಗಳ ಕಾಲ ನನ್ನ ಜೀವನ ಮುಡಿಪಾಗಿಟ್ಟಿದ್ದೆ” ಎಂದು ಹೇಳಿಕೊಂಡಿದ್ದಾರೆ. ವಿಡಿಯೊ ಸಿದ್ದಪಡಿಸಲು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದೆ, ನನ್ನ ಮಗುವಿನ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ಣೂ ಬದಿಗಿರಿಸಿ, ನನ್ನ ಕೌಟುಂಬಿಕ ಕ್ಷಣಗಳನ್ನು ತ್ಯಾಗ ಮಾಡಿದ್ದೆ ಎಂದು ಅವರು ಈ ವಿಡಿಯೊದಲ್ಲಿ ಹೇಳಿಕೊಂಡರು.
ನನ್ನ ಪಾಲಿಗೆ ವಾಹಿನಿಯು ಕೇವಲ ಒಂದು ವೃತ್ತಿಯಾಗಿರಲಿಲ್ಲ; ಬದಲಿಗೆ, ಒಂದು ವ್ಯಾಮೋಹವಾಗಿತ್ತು ಹಾಗೂ ಸತ್ಯಾಂಶಗಳೊಂದಿಗೆ ಸುಳ್ಳು ಮಾಹಿತಿ ಮತ್ತು ಸುಳ್ಳುಗಳನ್ನು ಹಿಮ್ಮೆಟ್ಟಿಸುವ ಒಂದು ಮಾಧ್ಯಮವಾಗಿತ್ತು ಎಂದೂ ಅವರು ಹೇಳಿಕೊಂಡಿದ್ದಾರೆ.
ಯೂಟ್ಯೂಬ್ ವಿಡಿಯೊ ತುಣುಕುಗಳ ನ್ಯಾಯಯುತ ಬಳಕೆಯ ನಿಯಮಗಳು ಸಾಮಾನ್ಯವಾಗಿ ಸಂಕೀರ್ಣವಾಗಿದ್ದು, ಅವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಾನು ಸಾರ್ವಜನಿಕರಿಗೆ ಮಾಹಿತಿ ನೀಡಲು ಸುದ್ದಿ ಸಂಸ್ಥೆಯೊಂದರ ವಿಡಿಯೊ ತುಣುಕನ್ನು ಬಳಸಿಕೊಂಡಿದ್ದೆನೆ ಹೊರತು, ವೈಯಕ್ತಿಕ ಲಾಭಕ್ಕಾಗಿಯಲ್ಲ. ಹೀಗಿದ್ದರೂ, ಪ್ರಶ್ನೆಗೊಳಗಾಗಿರುವ ಸುದ್ದಿ ಸಂಸ್ಥೆಯು ಅತ್ಯಂತ ಅಲ್ಪಾವಧಿಯಲ್ಲಿ ಹಲವು ಹಕ್ಕು ಸ್ವಾಮ್ಯ ಉಲ್ಲಂಘನೆ ನೋಟಿಸ್ ಅನ್ನು ರವಾನಿಸಿದೆ ಎಂದು ಅವರು ದೂರಿದರು.
“ಮೊನ್ನೆ ನಾನು ಎರಡು ಹಕ್ಕುಸ್ವಾಮ್ಯ ಉಲ್ಲಂಘನೆ ನೋಟಿಸ್ ಗಳನ್ನು ಸ್ವೀಕರಿಸಿದ್ದೆ. ಆದರೆ, ಯೂಟ್ಯೂಬ್ ವಾಹಿನಿಗಳನ್ನು ಮೂರು ನೋಟಿಸ್ ಗಳ ನಂತರವಷ್ಟೆ ತೆಗೆದು ಹಾಕುವುದರಿಂದ, ನಾನು ಕಾರ್ಯೋನ್ಮುಖನಾಗಲು ಇನ್ನೂ ಸಮಯವಿದೆ ಎಂದು ಭಾವಿಸಿದ್ದೆ. ಆದರೆ, ಮಧ್ಯಾಹ್ನದ ವೇಳೆಗೆ ಇನ್ನೂ ನಾಲ್ಕು ಹಕ್ಕುಸ್ವಾಮ್ಯ ಉಲ್ಲಂಘನೆ ನೋಟಿಸ್ ಗಳನ್ನು ಸ್ವೀಕರಿಸುವ ಮೂಲಕ, ಒಟ್ಟು ನೋಟಿಸ್ ಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿತ್ತು. ನಂತರ, ಇನ್ನು ಒಂದು ವಾರದೊಳಗಾಗಿ ನಿಮ್ಮ ವಾಹಿನಿಯನ್ನು ತೆಗೆದು ಹಾಕಲಾಗುವುದು ಎಂದು ಯೂಟ್ಯೂಬ್ ನಿಂದ ನಾನು ನೋಟಿಸ್ ಸ್ವೀಕರಿಸಿದೆ” ಎಂದು ಅವರು ಅಲವತ್ತುಕೊಂಡಿದ್ದಾರೆ.
ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸುದ್ದಿ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯತ್ನಿಸಿದೆಯಾದರೂ, ಅವರಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ. ಮರುದಿನ ಬೆಳಗ್ಗೆ ಹಾಗೂ ರಾತ್ರಿಯೂ ಹಕ್ಕುಸ್ವಾಮ್ಯ ಉಲ್ಲಂಘನೆ ನೋಟಿಸ್ ಗಳು ಬರಲಾರಂಭಿಸಿದ್ದರಿಂದ, ಪರಿಸ್ಥಿತಿ ಮತ್ತಷ್ಟು ವಿಷಮಿಸಿತು. ಈ ಕುರಿತು ಯೂಟ್ಯೂಬ್ ಅನ್ನು ಸಂಪರ್ಕಿಸಿದಾಗ, ಕೇವಲ ನನ್ನ ಮುಖ್ಯ ವಾಹಿನಿಯನ್ನು ಮಾತ್ರ ತೆಗೆದು ಹಾಕುವುದಿಲ್ಲ; ಬದಲಿಗೆ, ನನ್ನ ಹೆಸರಿನಲ್ಲಿ ಅಸ್ತಿತ್ವದಲ್ಲಿರುವ ಇನ್ನಾವುದಾದರೂ ವಾಹಿನಿ ಅಥವಾ ಭವಿಷ್ಯದಲ್ಲಿ ನನ್ನ ಹೆಸರಿನಲ್ಲಿ ಸೃಷ್ಟಿಯಾಗುವ ಬೇರಾವುದೇ ವಾಹಿನಿಗೂ ಇದೇ ಸಮಸ್ಯೆ ಎದುರಾಗಲಿದೆ ಎಂದು ನನಗೆ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
“ಈ ನಿರ್ಧಾರವು ನನ್ನನ್ನು ಯೂಟ್ಯೂಬ್ ನಿಂದ ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಸಮವಾಗಿದೆ. ಅಂತಹ ತಪ್ಪು ನಾನೇನು ಮಾಡಿದ್ದೇನೆ? ಸತ್ಯ ಮಾತನಾಡುವುದೀಗ ಅಪರಾಧವೇ?” ಎಂದು ಅವರು ಗದ್ಗದಿತ ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.
ಈ ಇಡೀ ಪ್ರಕರಣವು ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನದಂತೆ ಕಂಡು ಬರುತ್ತಿದೆ ಎಂದೂ ಆರೋಪಿಸಿರುವ ಅವರು, ವಿಶೇಷವಾಗಿ, ನನ್ನ ವಿಡಿಯೊಗಳು ಪ್ರಭಾವಶಾಲಿ ವ್ಯಕ್ತಿಗಳನ್ನು ಪ್ರಶ್ನಿಸುವುದರಿಂದ ಹಾಗೂ ಅರಗಿಸಿಕೊಳ್ಳಲಾಗದ ಸತ್ಯಗಳನ್ನು ಬಯಲು ಮಾಡುವುದರಿಂದ ಇಂತಹ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದೂ ದೂರಿದ್ದಾರೆ. “ನೀವು ಅಧಿಕಾರಸ್ಥರನ್ನು ಪ್ರಶ್ನಿಸಿದಾಗ, ನೀವದಕ್ಕೆ ಬೆಲೆ ತೆರಬೇಕಾಗುತ್ತದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸದರಿ ಸುದ್ದಿ ಸಂಸ್ಥೆಯನ್ನು ನಾನು ಮತ್ತೆ ಸಂಪರ್ಕಿಸಿದಾಗ, ಇನ್ನು ಐದು ದಿನಗಳೊಳಗಾಗಿ 24 ಲಕ್ಷ ರೂ. (ಅಂದಾಜು 21 ಲಕ್ಷ ಮತ್ತು ಶೇ. 18ರಷ್ಟು ಜಿಎಸ್ಟಿ) ಪಾವತಿಸಿದರೆ, ಹಕ್ಕುಸ್ವಾಮ್ಯ ಉಲ್ಲಂಘನೆ ನೋಟಿಸ್ ಅನ್ನು ಹಿಂಪಡೆಯಲಾಗುವುದು ಎಂದು ನನಗೆ ತಿಳಿಸಲಾಯಿತು. ಆದರೆ, ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ವ್ಯವಸ್ಥೆಗೊಳಿಸುವುದು ನನಗೆ ಅಸಾಧ್ಯ ಎಂದು ಅವರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
“ಇದು ಕೇವಲ ಯೂಟ್ಯೂಬ್ ವಾಹಿನಿಗೆ ಸಂಬಂಧಿಸಿದ್ದು ಮಾತ್ರವಲ್ಲ; ನನ್ನ ಇಡೀ ಜೀವನ ಈ ವಾಹಿನಿಯ ಮೇಲೆ ಅವಲಂಬಿತವಾಗಿದೆ. ಈ ಕೆಲಸದೊಂದಿಗೆ ನನ್ನ ಕುಟುಂಬ, ನನ್ನ ತಂಡ ಹಾಗೂ ಅವರ ಕುಟುಂಬಗಳೆಲ್ಲವೂ ನಂಟು ಹೊಂದಿವೆ. ಇದೊಂದೇ ನನ್ನ ಆದಾಯದ ಮೂಲ” ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ನನ್ನ ಮುಖ್ಯ ವಾಹಿನಿಯನ್ನೇನಾದರೂ ತೆಗೆದು ಹಾಕಿದರೆ, ನನ್ನ ಬ್ಯಾಕಪ್ ವಾಹಿನಿಯೊಂದಿಗೆ ಸಂಪರ್ಕ ಉಳಿಸಿಕೊಂಡಿರಿ ಎಂದು ತಮ್ಮ ಹಿಂಬಾಲಕರಿಗೆ ಮನವಿ ಮಾಡಿರುವ ಪೌರುಷ್ ಶರ್ಮ, “ನಾನು ಮತ್ತೆ ಯೂಟ್ಯೂಬ್ ಗೆ ಮರಳುತ್ತೇನೊ ಇಲ್ಲವೊ ಗೊತ್ತಿಲ್ಲ. ಆದರೆ, ಹಲವಾರು ವರ್ಷಗಳಿಂದ ನನಗೆ ಬೆಂಬಲಿಸುತ್ತಾ ಬಂದಿರುವ ಎಲ್ಲರಿಗೂ ಧನ್ಯವಾದ ಸಲ್ಲಿಸಲು ಬಯಸುತ್ತೇನೆ” ಎಂದು ಅವರು ಕಣ್ಣಾಲಿಗಳನ್ನು ತುಂಬಿಸಿಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ.
ನನಗೆ ನಿಮ್ಮ ಬೆಂಬಲವನ್ನು ಮುಂದುವರಿಸಬೇಕು ಎಂದು ತಮ್ಮ ವೀಕ್ಷಕರಿಗೆ ಮನವಿ ಮಾಡುವುದರೊಂದಿಗೆ ಅಂತ್ಯಗೊಳ್ಳುವ ಪೌರುಷ್ ಶರ್ಮರ ಈ ವಿಡಿಯೊದಲ್ಲಿ, ಬಲಿಷ್ಠ ಸಂಸ್ಥೆಗಳು ಇಂತಹ ವಿಷಯಗಳಲ್ಲಿ ಭಾಗಿಯಾದರೆ, ಡಿಜಿಟಲ್ ಸ್ವಾತಂತ್ರ್ಯ ಎಷ್ಟು ಟೊಳ್ಳಾಗಬಹುದು ಎಂಬುದರ ಕುರಿತೂ ಎಚ್ಚರಿಸಲಾಗಿದೆ.
ಸೂಚನೆ: ಈ ಕುರಿತು ಮುಂದುವರಿದಿರುವ ಕಾನೂನು ಹೋರಾಟದ ಕಾರಣಕ್ಕೆ ಸುದ್ದಿ ಸಂಸ್ಥೆಯ ಗುರುತು ಹಾಗೂ ಇನ್ನಿತರ ಕಾನೂನಾತ್ಮಕ ವಿವರಗಳನ್ನು ಇಲ್ಲಿ ಬಹಿರಂಗಗೊಳಿಸಲಾಗಿಲ್ಲ.







