ʼPR ಮೂಲಕ GDP ಚಿತ್ರವನ್ನು ಮೆರುಗುಗೊಳಿಸಬಹುದು, ಆರ್ಥಿಕತೆಯನ್ನಲ್ಲ’: ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರ ಹೇಳಿಕೆ ಉಲ್ಲೇಖಿಸಿದ ಕಾಂಗ್ರೆಸ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷ GDP ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಕಾಂಗ್ರೆಸ್, PR ಮೂಲಕ GDPಯ ಚಿತ್ರವನ್ನು ಮೆರುಗುಗೊಳಿಸಬಹುದು, ಆದರೆ ಆರ್ಥಿಕತೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ಸರಕಾರ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್, ಗರ್ಗ್ ಅವರ ಹೇಳಿಕೆಯಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷದ ಜಿಡಿಪಿಯನ್ನು 6 ಟ್ರಿಲಿಯನ್ ರೂಪಾಯಿಗಳಷ್ಟು ಪರಿಷ್ಕರಿಸುವ ಮೂಲಕ ಮೊದಲ ತ್ರೈಮಾಸಿಕದಲ್ಲಿ ಪ್ರಸಕ್ತ ವರ್ಷದ ಜಿಡಿಪಿ ಸುಮಾರು 10.3% ಹೆಚ್ಚಾಗಿದೆ. ಕಳೆದ ವರ್ಷದ GDPಯನ್ನು ಪರಿಷ್ಕರಿಸದೇ ಇದ್ದಿದ್ದರೆ, ಪ್ರಸಕ್ತ ವರ್ಷದ ಸ್ಥಿರ ಬೆಲೆಗಳಲ್ಲಿನ ಜಿಡಿಪಿ ಬೆಳವಣಿಗೆ ಕೇವಲ 2.6% ಮಾತ್ರ ಇರುತ್ತಿತ್ತು ಗರ್ಗ್ ವಿಡಿಯೊದಲ್ಲಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ಮೋದಿ ಸರಕಾರ ತನ್ನ ತಂಡ ಹಾಗೂ ಮಾಧ್ಯಮಗಳ ಅಂಕಿಅಂಶಗಳ ಕಸರತ್ತಿನ ಮೂಲಕ ಸೃಷ್ಟಿಸಿರುವ ಕೃತಕ GDP ಬೆಳವಣಿಗೆಯ ಬಗ್ಗೆ ಎಷ್ಟೇ ಪ್ರಚಾರ ಮಾಡಿದರೂ, ಅದರ ನೈಜ ಸತ್ಯ ಬಹಿರಂಗವಾಗಲಿದೆ. ಸರಕಾರ ಹೇಳುತ್ತಿರುವುದು ವಾಸ್ತವ ಪರಿಸ್ಥಿತಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
“ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಗರ್ಗ್ ಅವರು ಇದೀಗ ಈ ಹೇಳಿಕೆಯ ವಾಸ್ತವವನ್ನು ಬಹಿರಂಗಪಡಿಸಿದ್ದಾರೆ. ಅವರ ಅಂದಾಜಿನ ಪ್ರಕಾರ ನೈಜ GDP ಬೆಳವಣಿಗೆ 7.8% ಅಲ್ಲ, ಸುಮಾರು 2.6%” ಎಂದು ಜೈ ರಾಮ್ ರಮೇಶ್ ಹೇಳಿದ್ದಾರೆ.
ಆರ್ಥಿಕತೆ ನಿಜವಾಗಿಯೂ ಬಲಿಷ್ಠವಾಗಿರಬೇಕು ಎಂಬುದು ನಮ್ಮ ಆಶಯ. ಆದರೆ ಸುಳ್ಳಿನ ಅಡಿಪಾಯದ ಮೇಲೆ ಸೃಷ್ಟಿಸಿದ ಅಂಕಿಅಂಶಗಳಿಂದ ಬಲಿಷ್ಠ ಆರ್ಥಿಕತೆ ನಿರ್ಮಾಣವಾಗುವುದಿಲ್ಲ. ಬದಲಾಗಿ ಸತ್ಯವನ್ನು ಒಪ್ಪಿಕೊಳ್ಳುವುದರಿಂದ ಮಾತ್ರ ಬಲಿಷ್ಠ ಆರ್ಥಿಕತೆಯತ್ತ ಸಾಗಬಹುದು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಸರಕಾರ ಮೊದಲು ನೈಜ ಆರ್ಥಿಕ ಪರಿಸ್ಥಿತಿಯನ್ನು ಒಪ್ಪಿಕೊಳ್ಳಬೇಕು, ಬಳಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು, MSMEಗಳು ಮತ್ತು ಖಾಸಗಿ ಹೂಡಿಕೆಯನ್ನು ಉತ್ತೇಜಿಸಬೇಕು, ಬೇಡಿಕೆ ಹಾಗೂ ಆದಾಯ ಹೆಚ್ಚಬೇಕು, ಆರ್ಥಿಕ ಅಸಮಾನತೆ ಕಡಿಮೆಯಾಗಬೇಕು. ಆಪ್ತ ಬಂಡವಾಳಶಾಹಿಗಳನ್ನು ಉತ್ತೇಜಿಸುವ ಬದಲು ನ್ಯಾಯಯುತ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಹೇಳಿದ್ದಾರೆ.
मोदी सरकार जितना अपनी टीम और मीडिया के जरिए आंकड़ों की बाजीगरी से तैयार फर्जी GDP बढ़ोतरी का ढोल पीटेगी, उतना ही उसकी असलियत सामने आएगी क्योंकि यह ज़मीनी हक़ीक़त के बिलकुल उलट है।
— Jairam Ramesh (@Jairam_Ramesh) September 2, 2026
पूर्व वित्त सचिव सुभाष गर्ग ने अब इस दावे की पोल खोल दी है। उनका आकलन है कि असल GDP ग्रोथ करीब 2.6%… https://t.co/hKxsm8U2PJ






