ಚಂದ್ರನ ಅಂಗಳದಿಂದ ಪ್ರಥಮ ವಿಡಿಯೊ ಹಂಚಿಕೊಂಡ ಪ್ರಗ್ಯಾನ್ ರೋವರ್

Photo: ISRO
ಹೊಸದಿಲ್ಲಿ: ಚಂದಿರನ ಅಂಗಳದ ಮೇಲೆ ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ರೋವರ್ ಉರುಳುತ್ತಿರುವ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಂಚಿಕೊಂಡಿದೆ ಎಂದು ndtv.com ವರದಿ ಮಾಡಿದೆ.
ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಇಸ್ರೋ, “… ಹಾಗೂ ವಿಕ್ರಂ ಲ್ಯಾಂಡರ್ ನಿಂದ ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ರೋವರ್ ಚಂದಿರನ ಅಂಗಳಕ್ಕೆ ಇಳಿದ ರೀತಿ ಹೀಗಿದೆ” ಎಂದು ಹೇಳಿದೆ.
ಬುಧವಾರ ಸಂಜೆ ಚಂದ್ರಯಾನ-3 ಯೋಜನೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದಿರನ ಅಂಗಳದ ಮೇಲೆ ಮೃದುವಾಗಿ ಕಾಲೂರುವುದರೊಂದಿಗೆ, ಚಂದಿರನ ಅಂಗಳದ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಅನ್ನು ಇಳಿಸಿದ ನಾಲ್ಕು ದೇಶಗಳ ಪೈಕಿ ಭಾರತವೂ ಒಂದಾಯಿತು.
ಚಂದಿರನ ಧೂಳು ಹಾಗೂ ತಾಪಮಾನದಿಂದ ಗಗನ ನೌಕೆಯ ಚಲಿಸುವ ಭಾಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಇಸ್ರೊ ಹೇಳಿದೆ.
ಚಂದಿರನ ಅಂಗಳದಲ್ಲಿ ಗಗನ ನೌಕೆಯನ್ನು ಇಳಿಸುವ ಭಾರತದ ಮೂರನೆಯ ಪ್ರಯತ್ನ ಇದಾಗಿದೆ. ಸೆಪ್ಟೆಂಬರ್, 2019ರಲ್ಲಿ ಚಂದಿರನ ಅಂಗಳದ ಮೇಲೆ ಚಂದ್ರಯಾನ-2 ಯೋಜನೆಯ ಲ್ಯಾಂಡರ್ ಪತನಗೊಂಡಿದ್ದರಿಂದ, ಆ ಯೋಜನೆಯನ್ನು ಭಾಗಶಃ ವಿಫಲವೆಂದು ಘೋಷಿಸಲಾಗಿತ್ತು.
ಚಂದ್ರಯಾನ-3 ಯೋಜನೆಯ ಯಶಸ್ಸಿನ ವಿಶೇಷತೆಯೆಂದರೆ, ಈವರೆಗೆ ಯಾವುದೇ ಗಗನ ನೌಕೆಯೂ ಚಂದಿರನ ದಕ್ಷಿಣ ಧ್ರುವದಲ್ಲಿ ಇಳಿಯುವಲ್ಲಿ ಯಶಸ್ವಿಯಾಗಿರಲಿಲ್ಲ. ಚಂದಿರನ ದಕ್ಷಿಣ ಧ್ರುವದಿಂದ ತೀರಾ ದೂರವಿರುವ ಮಧ್ಯಭಾಗದಲ್ಲೇ ಮಾನವ ಸಹಿತ ಅಪೊಲೊ ಚಂದ್ರಯಾನ ಯೋಜನೆಯ ಗಗನ ನೌಕೆ ಸೇರಿದಂತೆ ಎಲ್ಲ ನೌಕೆಗಳೂ ಚಂದಿರನ ಅಂಗಳದಲ್ಲಿ ಇಳಿದಿದ್ದದ್ದು. ಈ ಭಾಗವು ಕುಳಿಗಳು ಹಾಗೂ ಆಳವಾದ ಕಂದಕಗಳಿಂದ ಕೂಡಿದೆ.
ಚಂದ್ರಯಾನ-3 ಯೋಜನೆಯ ಶೋಧನೆಯು ಚಂದಿರನ ಅಂಗಳದಲ್ಲಿನ ಚಂದ್ರನ ಬಹು ಮುಖ್ಯ ಮೌಲ್ಯಯುತ ಸಂಪನ್ಮೂಲಗಳ ಪೈಕಿ ಅತ್ಯಂತ ಪ್ರಭಾವಶಾಲಿಯಾದ ನೀರಿನ ಕುರುಹು ಕುರಿತು ಈವರೆಗಿನ ಜ್ಞಾನವನ್ನು ಸುಧಾರಿಸಿ, ವಿಸ್ತರಿಸುವ ಸಾಧ್ಯತೆ ಇದೆ.







