ಸಂವಿಧಾನ ಗೌರವಿಸುತ್ತೀರಾದರೆ ಮನುಸ್ಮೃತಿ ಸುಟ್ಟು ಹಾಕಿ : ಮೋದಿ, ರಾಹುಲ್ಗೆ ಪ್ರಕಾಶ್ ಅಂಬೇಡ್ಕರ್ ಸವಾಲು

ಪ್ರಕಾಶ್ ಅಂಬೇಡ್ಕರ್ | PC : PTI
ಮುಂಬೈ: ನೀವು ಸಂವಿಧಾನಕ್ಕೆ ಗೌರವ ನೀಡುತ್ತೀರಿ ಎಂದಾದರೆ ಮನುಸ್ಮೃತಿ ಪ್ರತಿಗಳನ್ನು ಸುಟ್ಟು ಹಾಕಿ ಎಂದು ವಂಚಿತ್ ಬಹುಜನ್ ಅಘಾಡಿ ಸಂಸ್ಥಾಪಕ ಹಾಗೂ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶನಿವಾರ ಸವಾಲು ಹಾಕಿದ್ದಾರೆ.
‘‘ಬಿಜೆಪಿ ಹಾಗೂ ಕಾಂಗ್ರೆಸ್ ಸಂವಿಧಾನವನ್ನು ನಿಜವಾಗಿ ಪ್ರೀತಿಸುತ್ತಿದ್ದರೆ, ಮನುಸ್ಮೃತಿ ಪ್ರತಿಯನ್ನು ಸುಟ್ಟು ಹಾಕುವಂತೆ ನಾನು ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಅವರಲ್ಲಿ ಆಗ್ರಹಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.
ನ್ಯಾಯವಾದಿ, ರಾಜಕಾರಣಿ ಹಾಗೂ ಹೋರಾಟಗಾರರಾಗಿರುವ ಪ್ರಕಾಶ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮರಿ ಮೊಮ್ಮಗ. ಅವರು ರಾಜ್ಯಸಭೆ ಹಾಗೂ ಲೋಕಸಭೆಯ ಮಾಜಿ ಸದಸ್ಯ.
‘‘ಬಿಜೆಪಿ ಹಾಗೂ ಕಾಂಗ್ರೆಸ್ ಸಂವಿಧಾನಕ್ಕೆ ಚೂರಿ ಹಾಕಿದೆ. ಅಂಚಿಗೆ ತಳ್ಳಲ್ಪಟ್ಟ, ದುರ್ಬಲ ಜಾತಿ ಹಾಗೂ ಸಮುದಾಯಗಳ ಮೇಲೆ ದೌರ್ಜನ್ಯ ಎಸಗುತ್ತಾ ಬಂದಿದೆ. ಅವರು ಬಾಬಾ ಸಾಹೇಬರ ಆದರ್ಶಗಳನ್ನು ಹಾಗೂ ಸಂವಿಧಾನದ ಮೌಲ್ಯಗಳನ್ನು ಭ್ರಷ್ಟಗೊಳಿಸಿದ್ದಾರೆ’’ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.







