ಬಿಹಾರ ವಿಧಾನಸಭಾ ಚುನಾವಣೆ: ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿರುವ ಪ್ರಶಾಂತ್ ಕಿಶೋರ್ ನೇತೃತ್ವದ ʼಜನ್ ಸುರಾಜ್ʼ ಪಕ್ಷ

Photo credit: PTI
ಪಟ್ನಾ: ಚುನಾವಣಾ ತಂತ್ರಜ್ಞ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ ನೇತೃತ್ವದ ʼಜನ್ ಸುರಾಜ್ʼ ಪಕ್ಷವು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 243 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ವರದಿಯಾಗಿದೆ. ಇದರಿಂದಾಗಿ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿಕೂಟ, ವಿರೋಧ ಪಕ್ಷಗಳ ಆರ್ಜೆಡಿ-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಪ್ರಶಾಂತ್ ಕಿಶೋರ್ ನೇತೃತ್ವದ ʼಜನ್ ಸುರಾಜ್ʼ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಸೋಮವಾರ ಪಟ್ನಾದಲ್ಲಿ ನಡೆದ ʼಜನ್ ಸುರಾಜ್ʼ ಪಕ್ಷದ ಪ್ರಪ್ರಥಮ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಕ್ಷದ ಅಭ್ಯರ್ಥಿಗಳನ್ನು ಹಂತಹಂತವಾಗಿ ಸುಮಾರು 4-5 ಹಂತದಲ್ಲಿ ಆಯ್ಕೆ ಮಾಡಲಾಗುವುದು ಎಂದು ಹೇಳಲಾಗಿದೆ. ಇದೇ ಪ್ರಥಮ ಬಾರಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ʼಜನ್ ಸುರಾಜ್ʼ ಪಕ್ಷ, ರಾಜ್ಯದಲ್ಲಿನ 40 ಮೀಸಲು ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಲಿದೆ ಎನ್ನಲಾಗಿದೆ.
ಇದರ ಹೊರತಾಗಿ, ಸಭೆಯಲ್ಲಿ ಪಕ್ಷದ ರಚನಾತ್ಮಕ ಸಂಘಟನೆಯನ್ನು ಬಲಿಷ್ಠಗೊಳಿಸುವ ಕುರಿತೂ ಗಂಭೀರ ಚರ್ಚೆ ನಡೆಸಲಾಯಿತು ಎಂದು ವರದಿಯಾಗಿದೆ.







