ಮಣಿಪುರದಲ್ಲಿ ಹೊಸ ಸರ್ಕಾರ ರಚನೆಗೆ ಸಿದ್ಧತೆ; ನಾಯಕನ ಆಯ್ಕೆಗೆ ಮುಂದಾದ ಬಿಜೆಪಿ ಶಾಸಕರು

ತರುಣ್ ಛುಗ್ PC: x.com/CNNnews18
ಹೊಸದಿಲ್ಲಿ: ಸುಮಾರು ಒಂದು ವರ್ಷದ ರಾಷ್ಟ್ರಪತಿ ಆಳ್ವಿಕೆಯ ಬಳಿಕ ಮಣಿಪುರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ವೇದಿಕೆ ಸಜ್ಜಾಗಿದೆ. ಫೆಬ್ರವರಿ 12ಕ್ಕೆ ರಾಷ್ಟ್ರಪತಿ ಆಡಳಿತದ ಅವಧಿ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಬಿಜೆಪಿ ಶಾಸಕಾಂಗ ಪಕ್ಷ ಹೊಸ ನಾಯಕನನ್ನು ಆಯ್ಕೆ ಮಾಡುವ ಮೂಲಕ ಜನಪ್ರಿಯ ಸರ್ಕಾರ ರಚನೆಯ ಪ್ರಕ್ರಿಯೆಗೆ ನಾಂದಿ ಹಾಡಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಬಿಜೆಪಿ ಶಾಸಕರು ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದು, ಶಾಸಕಾಂಗ ಪಕ್ಷದ ನೂತನ ನಾಯಕ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯ ದಿನಾಂಕವನ್ನು ಬಿಜೆಪಿ ಅಧಿಕೃತವಾಗಿ ಪ್ರಕಟಿಸದಿದ್ದರೂ, ಪ್ರಧಾನ ಕಾರ್ಯದರ್ಶಿ ತರುಣ್ ಛುಗ್ ಅವರನ್ನು ಕೇಂದ್ರ ವೀಕ್ಷಕರಾಗಿ ನೇಮಕ ಮಾಡಲಾಗಿದೆ.
60 ಮಂದಿ ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದು, ಕುಕಿ ಮತ್ತು ಮೈತೈ ಜನಾಂಗಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷದ ಫೆಬ್ರವರಿ 16ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು. ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಕೆಲ ದಿನಗಳ ಬಳಿಕ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿತ್ತು. 2017 ಮತ್ತು 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ ರಚಿಸಿತ್ತು.
ಜನಾಂಗೀಯ ಸಂಘರ್ಷ ಭುಗಿಲೆದ್ದ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವವು ಸವಾಲಿನ ರಾಜಕೀಯ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಸಂಘರ್ಷ ಶಮನಕ್ಕೆ ಕೇಂದ್ರ ಸರ್ಕಾರ ಎರಡೂ ಜನಾಂಗಗಳ ನಡುವೆ ಸಂಧಾನ ಮಾತುಕತೆ ನಡೆಸಿದ್ದು, ಕಳೆದ ಸೆಪ್ಟೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಕುಕಿಗಳು ಆಡಳಿತಾತ್ಮಕ ಸ್ವಾಯತ್ತತೆಗೆ ಆಗ್ರಹಿಸುತ್ತಿದ್ದರೆ, ಮೈತೈಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.







