ಪೌರರ ರಕ್ಷಣೆಗಾಗಿ ಪ್ರತೀಕಾರದ ದಾಳಿಗೆ ಹಿಂಜರಿಯಲಾರೆವು: ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು | PC : PTI
ಹೊಸದಿಲ್ಲಿ,ಆ.14: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಕ್ಷಿಪ್ರ ಪ್ರತಿಕ್ರಿಯೆಯಾದ ಆಪರೇಶನ್ ಸಿಂಧೂರ್ , ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಐತಿಹಾಸಿಕ ಉದಾಹರಣೆಯಾಗಿ ಸ್ಮರಿಸಲ್ಪಡಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಭಾರತದ 79ನೇ ಸ್ವಾತಂತ್ರ್ಯದಿನಾಚರಣೆಯ ಮುನ್ನಾದಿನವಾದ ಗುರುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಪಹಲ್ಗಾಮ್ ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯು ‘ಹೇಡಿತನದ ಹಾಗೂ ಘೋರವಾದ ಅಮಾನವೀಯ ಕೃತ್ಯ’ವೆಂದು ಬಣ್ಣಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ನಿರ್ಣಾಯಕವಾದ ಹಾಗೂ ಉಕ್ಕಿನಂತಹ ದೃಢಸಂಕಲ್ಪದೊಂದಿಗೆ ‘ ಆಪರೇಶನ್ ಸಿಂಧೂರ’ ಕಾರ್ಯಾಚರಣೆಯನ್ನು ನಡೆಸಿತು. ದೇಶ ರಕ್ಷಣೆಯ ವಿಚಾರದಲ್ಲಿ ಯಾವುದೇ ಸನ್ನಿವೇಶವನ್ನು ಎದುರಿಸಲು ನಮ್ಮ ಸಶಸ್ತ್ರ ಪಡೆಗಳು ಸಿದ್ದವೆಂದು ಆಪರೇಶನ್ ಸಿಂಧೂರ್ ತೋರಿಸಿಕೊಟ್ಟಿದೆ ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಆನಂತರ ಭಾರತವು ಒಗ್ಗಟ್ಟಿನೊಂದಿಗೆ ಪ್ರತಿಕ್ರಿಯಿಸಿದೆ. ನಮ್ಮನ್ನು ವಿಭಜಿಸಲು ಬಯಸುವವರಿಗೆ ನೀಡಿದ ಅತ್ಯಂತ ಸೂಕ್ತ ಉತ್ತರ ಅದಾಗಿತ್ತು ಎಂದರು. ನಾವು ಯಾವತ್ತೂ ಆಕ್ರಮಣಕಾರಿಗಳಾಗಲಾರೆವು. ಆದರೆ ನಮ್ಮ ಪೌರರ ರಕ್ಷಣೆಗಾಗಿ ಪ್ರತೀಕಾರ ದಾಳಿ ನಡೆಸಲು ಹಿಂಜರಿಯಲಾರೆವು ಎಂದು ರಾಷ್ಟ್ರಪತಿ ತನ್ನ 24 ನಿಮಿಷಗಳ ಭಾಷಣದಲ್ಲಿ ಹೇಳಿದರು.
ಕಾಶ್ಮೀರ ಕಣಿವೆಯಲ್ಲಿ ರೈಲು ಸೇವೆಯ ಆರಂಭ ಒಂದು ಮಹಾನ್ ಸಾಧನೆಯೆಂದು ಹೇಳಿದ ಅವರು, ಇದರಿಂದ ಆ ಪ್ರದೇಶದಲ್ಲಿ ವಾಣಿಜ್ಯ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದರು. ಇದೇ ವೇಳೆ ಆಯುಷ್ಮಾನ್ ಭಾರತ ಯೋಜನೆಯಿಂದ 55 ಕೋಟಿ ಮಂದಿ ಪ್ರಯೋಜನ ಪಡೆದಿದ್ದಾರೆ. ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದ್ದು, ಸಂವಿಧಾನವು ನಮಗೆ ಸರ್ವೋಚ್ಛವಾಗಿದೆ ಎಂದರು.
►ರಾಷ್ಟ್ರಪತಿ ಭಾಷಣದ ಹೈಲೈಟ್ಸ್
*ದೇಶದ ಒಟ್ಟು ಆಂತರಿಕ ಉತ್ಪಾದನೆಯ ಬೆಳವಣಿಗೆ ದರವು ಕಳೆದ ವಿತ್ತ ವರ್ಷದಲ್ಲಿ ಶೇ.6.5ಕ್ಕೆ ತಲುಪಿದೆ. ಜಗತ್ತಿನ ಬೃಹತ್ ಆರ್ಥಿಕತೆಗಳ ಪೈಕಿ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ.
*ದೇಶದ ಕೃತಕ ಬುದ್ಧಿಮತ್ತೆ (ಎಐ) ಸಾಮರ್ಥ್ಯವನ್ನು ಬಲಪಡಿಸಲು ಸರಾಕರವು ಭಾರತ-ಎಐ ಮಿಶನ್ ಆನ್ನು ಆರಂಭಿಸಿದೆ. 2047ನೇ ಇಸವಿಯೊಳಗೆ ಭಾರತವು ಜಾಗತಿಕ ಎಐ ಕೇಂದ್ರವಾಗಿ ರೂಪುಗೊಳ್ಳಬೇಕಿದೆ.
*ಯುವಪ್ರತಿಭೆಗಳಿಂದಾಗಿ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾರತವು ಅಭೂತಪೂರ್ವವಾಗಿ ವಿಸ್ತರಣೆಗೊಂಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ಶುಭಾಂಶು ಶುಕ್ಲಾ ಅವರ ಪಯಣವು ಭಾರತದ ಇಡೀ ತಲೆಮಾರು ದೊಡ್ಡ ಕನಸನ್ನು ಕಾಣುವಂತೆ ಮಾಡಿದೆ.
*ಆಪರೇಶನ್ ಸಿಂಧೂರ ಕಾರ್ಯಾಚರಣೆಯು ರಕ್ಷಣಾವಲಯದಲ್ಲಿ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಸೂಕ್ತ ನಿದರ್ಶನವಾಗಿದೆ. ಈ ಕಾರ್ಯಾಚರಣೆಯ ಫಲಿತಾಂಶವು ನಾವು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಮುರ್ಮು ಹೇಳಿದರು.







