ಅಮೆರಿಕ ಭೇಟಿಗೆ ಅನುಮತಿ ನಿರಾಕರಣೆ : ಸ್ಪಷ್ಟೀಕರಣ ಕೋರಿ ವಿದೇಶಾಂಗ ಸಚಿವರಿಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಅಮೆರಿಕಾಗೆ ಅಧಿಕೃತ ಭೇಟಿಗೆ ಅನುಮತಿ ನಿರಾಕರಿಸಿದ ಬಗ್ಗೆ ಸ್ಪಷ್ಟೀಕರಣ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಜೂ.14 ರಿಂದ 27ರವರೆಗೆ ಪ್ರಿಯಾಂಕ್ ಖರ್ಗೆ ಅಮೆರಿಕ ಭೇಟಿಗೆ ಅಧಿಕೃತ ಕಾರ್ಯಕ್ರಮ ನಿಗದಿಯಾಗಿತ್ತು.
ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ ಪ್ರಿಯಾಂಕ್ ಖರ್ಗೆ, ಅಮೆರಿಕ ಭೇಟಿಗೆ ರಾಜಕೀಯ ಅನುಮತಿ ನಿರಾಕರಿಸಿದ್ದಕ್ಕೆ ಸ್ಪಷ್ಟನೆ ಕೋರಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದೇನೆ. ಕರ್ನಾಟಕದ ಜನರಿಗೆ ನಾನು ಜವಾಬ್ದಾರಿಯುತನಾಗಿರುವುದರಿಂದ ಈ ಪತ್ರವನ್ನು ಬರೆದಿದ್ದೇನೆ. ಈ ಭೇಟಿಯು ಹೂಡಿಕೆಗಳನ್ನು ಆಕರ್ಷಿಸುವ ಮತ್ತು ರಾಜ್ಯಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿತ್ತು ಎಂದು ಹೇಳಿದರು.
ಪತ್ರದಲ್ಲೇನಿದೆ?
ಜೂ.14 ರಿಂದ 27ರವರೆಗೆ ಅಮೆರಿಕ ಭೇಟಿಗೆ ಅಧಿಕೃತ ಕಾರ್ಯಕ್ರಮ ನಿಗದಿಯಾಗಿತ್ತು. ಅಮೆರಿಕ ಭೇಟಿ ವೇಳೆ ಬೋಸ್ಟನ್‌ನಲ್ಲಿ ಬಯೋ ಇಂಟರ್ನ್ಯಾಷನಲ್ ಕನ್ವೆನ್ಷನ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಮಾವೇಶವೊಂದರಲ್ಲಿ ಭಾಗವಹಿಸಬೇಕಾಗಿತ್ತು. ಇದಲ್ಲದೆ ಪ್ರಮುಖ ಕಂಪೆನಿಗಳು, ವಿಶ್ವವಿದ್ಯಾನಿಲಯ, ಸಂಸ್ಥೆಗಳೊಂದಿಗೆ ಸಭೆ ನಡೆಸುವ ಉದ್ದೇಶವಿತ್ತು. ಬಂಡವಾಳ ಹೂಡಿಕೆ, ಉದ್ಯೋಗವಕಾಶ ಸೃಷ್ಟಿ ಒಡಂಬಡಿಕೆಗಳ ಬಗ್ಗೆ ಚರ್ಚಿಸಬೇಕಾಗಿತ್ತು.
ಕರ್ನಾಟಕ ತಂತ್ರಜ್ಞಾನದ ರಾಜಧಾನಿ. ದೇಶಕ್ಕೆ ಮಾತ್ರವಲ್ಲ ಏಷ್ಯಾ ಪೆಸಿಫಿಕ್ ಪ್ರಾಂತ್ಯದ ಅಭಿವೃದ್ಧಿ ಎಂಜಿನ್. ಸ್ಟಾರ್‌ಟಪ್ ಹಾಗೂ ಆವಿಷ್ಕಾರಗಳಲ್ಲಿ ಜಾಗತಿಕ ನಾಯಕನ ಸಾಲಿನಲ್ಲಿ ನಿಂತಿರುವ ರಾಜ್ಯ ನಮ್ಮದು. ಇಂತಹ ರಾಜ್ಯದ ಐಟಿ-ಬಿಟಿ ಸಚಿವರಿಗೆ ರಾಜಕೀಯ ಅನುಮತಿ ನಿರಾಕರಿಸಿದ್ದು ಯಾಕೆ ಎಂಬ ಬಗ್ಗೆ ಕಾರಣ ತಿಳಿಸದಿರುವುದು ಸರಿಯಲ್ಲ. ವಿನಾಕಾರಣ ಅನುಮತಿ ನಿರಾಕರಣೆ ನಮ್ಮ ಮುಂದಿನ ಕಾರ್ಯಕ್ರಮಗಳ ಯೋಜನೆಗಳಿಗೂ ತೊಂದರೆ ಉಂಟು ಮಾಡುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.







