"ಅಸಮರ್ಥನೀಯವಾದದ್ದು ಇನ್ನಷ್ಟು ಕಾಲ ಸಮರ್ಥಿಸಲಾರೆ": ಮಾಜಿ ಆಪ್ ವಕ್ತಾರೆ ಪ್ರಿಯಾಂಕಾ ಕಕ್ಕರ್ ಕಾಂಗ್ರೆಸ್ ಸೇರ್ಪಡೆ

ಮಾಜಿ ಆಪ್ ವಕ್ತಾರೆ ಪ್ರಿಯಾಂಕಾ ಕಕ್ಕರ್ (Photo: ANI News)
ಹೊಸದಿಲ್ಲಿ: ಶನಿವಾರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದ ಮಾಜಿ ಆಪ್ ವಕ್ತಾರೆ ಪ್ರಿಯಾಂಕಾ ಕಕ್ಕರ್, “ಅಸಮರ್ಥನೀಯವಾದ್ದನ್ನು ಇನ್ನಷ್ಟು ಕಾಲ ಸಮರ್ಥಿಸಲಾರೆ” ಎಂದು ಹೇಳಿದರು.
ಆಪ್ ತೊರೆಯುವ ತಮ್ಮ ನಿರ್ಧಾರದ ಕುರಿತು ವಿವರಿಸಿದ ಪ್ರಿಯಾಂಕಾ ಕಕ್ಕರ್, “ಆಪ್ ಬಂಗಲೆಯನ್ನಾಗಲಿ ಅಥವಾ ಕಾರನ್ನಾಗಲಿ ಖರೀದಿಸುವುದಿಲ್ಲ ಎಂಬ ಮಾತಿದ್ದ ಕಾಲವೊಂದಿತ್ತು. ಆದರೆ, ಬಳಿಕ, ಖಾಸಗಿ ಪ್ರಯಾಣಕ್ಕಾಗಿ ಹೆಲಿಕಾಪ್ಟರ್ ಗಳನ್ನು ಬಳಸಲು ಪ್ರಾರಂಭಿಸಲಾಯಿತು. ಹೀಗಾಗಿ, ನಾನು ಅಸಮರ್ಥನೀಯವಾದದ್ದನ್ನು ಇನ್ನಷ್ಟು ಕಾಲ ಸಮರ್ಥಿಸಲಾರೆ” ಎಂದು ತಿಳಿಸಿದರು.
“ಒಂದು ಹಂತದಲ್ಲಿ ತನ್ನೊಳಗಿನ ಸತ್ವ ಹಾಗೂ ಬುದ್ಧಿವಂತಿಕೆಯಿಂದ ಜನರನ್ನು ಆಕರ್ಷಿಸಿದ್ದ ಆಮ್ ಆದ್ಮಿ ಪಕ್ಷವನ್ನು ನೋಡಿದಾಗ, ನನಗೆ ನಾನೇ ಗೆರೆ ಎಳೆದುಕೊಂಡಿದ್ದೆ. ಆದರೆ, ಆ ಆಕರ್ಷಣೆಯನ್ನು ಉಳಿಸಿಕೊಳ್ಳಲು ಅಸಾಧ್ಯವಾಯಿತು” ಎಂದೂ ಅವರು ಹೇಳಿದರು.
ಪಂಜಾಬ್ ನಲ್ಲಿ ಉನ್ನತ ಹುದ್ದೆಗಳಿಗೆ ಜನರನ್ನು ನೇಮಕ ಮಾಡಿರುವ ಕುರಿತೂ ಅವರು ಪ್ರಶ್ನಿಸಿದರು. “ಈಗ ಒಳಗೆ ಕರೆತಂದಿರುವ ವ್ಯಕ್ತಿಗಳಾರು? ಮತಗಟ್ಟೆ ಹಂತದಲ್ಲೂ ಕೆಲಸ ಮಾಡಿರದಿದ್ದವರನ್ನು ರಾಜಸ್ತಾನದಿಂದ ಕರೆತರಲಾಗಿದ್ದು, ಪಂಜಾಬ್ ನಲ್ಲಿ ಉನ್ನತ ಸ್ಥಾನಗಳನ್ನು ನೀಡಲಾಗಿದೆ. ಇದರೊಂದಿಗೆ ಬಂಗಲೆ ಮತ್ತು ಕಾರುಗಳನ್ನೂ ಒದಗಿಸಲಾಗಿದೆ” ಎಂದು ಅವರು ಆರೋಪಿಸಿದರು.
“ಅಸರ್ಮಥನೀಯವಾದದ್ದನ್ನು ನಾನು ಎಷ್ಟು ಕಾಲ ಸಮರ್ಥಿಸಲು ಸಾಧ್ಯ?” ಎಂದೂ ಅವರು ಪ್ರಶ್ನಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪ್ರಶಂಸಿಸಿದ ಪ್ರಿಯಾಂಕಾ ಕಕ್ಕರ್, ರಾಹುಲ್ ಗಾಂಧಿ ಸ್ಥಿತಿಸ್ಥಾಪಕತ್ವ ಗುಣ ಹೊಂದಿದ್ದು, ಅವರು ಹಾಗೂ ಅವರ ಪಕ್ಷ ದಾಳಿಗಳನ್ನು ತಡೆದುಕೊಂಡಿರುವುದನ್ನು ನಾನು ಕಂಡಿದ್ದೇನೆ” ಎಂದು ಹೇಳಿದರು.
“ತಮ್ಮ ಯೋಚನೆಗಳನ್ನು ಪ್ರಚಾರ ಮಾಡಲು ಹಿಂಜರಿಯದಿರುವ ಯಾವುದಾದರೂ ವ್ಯಕ್ತಿ ಇದ್ದರೆ ಅದು ರಾಹುಲ್ ಗಾಂಧಿ ಮಾತ್ರ. ರಾಹುಲ್ ಗಾಂಧಿ ಮಾತ್ರ ಕ್ಯಾಮೆರಾದೆದುರು ಕಣ್ಣೀರು ಸುರಿಸದಿರುವ ನಾಯಕನಾಗಿರುವುದನ್ನು ನಾನು ಗಮನಿಸಿದ್ದೇನೆ. ಇಂದು ಅದನ್ನು ಮಾಡದಿರುವ ಏಕೈಕ ನಾಯಕ ರಾಹುಲ್ ಗಾಂಧಿ. ಅವರು ಸ್ಥಿತಿಸ್ಥಾಪಕತ್ವ ಗುಣದವರಾಗಿದ್ದಾರೆ. ಅವರನ್ನು ಕುಗ್ಗಿಸಲು ಇಡೀ ಆಡಳಿತ ಯಂತ್ರ ಹೇಗೆ ಅವರನ್ನು ಅವಮಾನಿಸಿತು ಎಂಬುದನ್ನು ನಾನು ಕಂಡಿದ್ದೇನೆ” ಎಂದೂ ಅವರು ತಿಳಿಸಿದರು.






