ದಿಲ್ಲಿ ಮೆಟ್ರೊ ನಿಲ್ದಾಣಗಳಲ್ಲಿ ಖಾಲಿಸ್ತಾನ್ ಪರ ಘೋಷಣೆ

Photo: ANI
ಹೊಸದಿಲ್ಲಿ: ಜಿ20 ಶೃಂಗ ಸಭೆಗೆ ಕೆಲವು ದಿನಗಳು ಇರುವಂತೆಯೇ ದಿಲ್ಲಿಯ ಕನಿಷ್ಠ 5 ಮೆಟ್ರೊ ನಿಲ್ದಾಣಗಳ ಗೋಡೆಗಳಲ್ಲಿ ಖಾಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಜಿ20 ಶೃಂಗ ಸಭೆ ಸೆಪ್ಟಂಬರ್ 9 ಹಾಗೂ 10ರಂದು ನಡೆಯಲಿದೆ. ಈ ಸಭೆಯಲ್ಲಿ 30ಕ್ಕೂ ಅಧಿಕ ರಾಷ್ಟ್ರಗಳ ಮುಖ್ಯಸ್ಥರು, ಯುರೋಪ್ ಒಕ್ಕೂಟದ ಹಿರಿಯ ಅಧಿಕಾರಿಗಳು, ಆಹ್ವಾನಿತ ಅತಿಥಿ ರಾಷ್ಟ್ರಗಳು ಹಾಗೂ ಅಂತರ್ ರಾಷ್ಟ್ರೀಯ ಸಂಘಟನೆಗಳ 14 ಮಂದಿ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ.
ಸಿಕ್ಖ್ ಫಾರ್ ಜಸ್ಟಿಸ್ (ಎಸ್ಎಫ್ಜೆ )ನ ಶಂಕಿತ ಕಾರ್ಯಕರ್ತರು ದಿಲ್ಲಿಯ ಶಿವಾಜಿ ಪಾರ್ಕ್ನಿಂದ ಪಂಜಾಬಿ ಬಾಗ್ ವರೆಗೆ ಹಲವು ಮೆಟ್ರೊ ನಿಲ್ದಾಣಗಳಲ್ಲಿ ಖಾಲಿಸ್ಥಾನ್ ಪರ ಘೋಷಣೆಗಳನ್ನು ಬರೆದಿದ್ದಾರೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ‘‘ಸಿಕ್ಖ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ಖಾಲಿಸ್ಥಾನ್ ಪರ ಘೋಷಣೆಗಳನ್ನು ಬರೆದ ದಿಲ್ಲಿ ಮೆಟ್ರೊ ನಿಲ್ದಾಣದ ವೀಡಿಯೊ ದೃಶ್ಯಾವಳಿಯನ್ನು ಕೂಡ ಬಿಡುಗಡೆ ಮಾಡಿದೆ’’ ಎಂದು ಅವರು ತಿಳಿಸಿದ್ದಾರೆ.
‘‘ಇದು ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ. ನಾವು ದಿಲ್ಲಿ ಪೊಲೀಸರಿಗೆ ಸಹಕರಿಸಲಿದ್ದೇವೆ’’ ಎಂದು ದಿಲ್ಲಿ ಮೆಟ್ರೊ ರೈಲು ನಿಗಮದ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಹಾಗೂ ತನಿಖೆ ಆರಂಭಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.





