‘ಗೋಲ್ಮಾಲ್-3’ ಡೈಲಾಗ್ ಗೆ ರೊಚ್ಚಿಗೆದ್ದ ಪ್ರಾಧ್ಯಾಪಕ; ವಿದ್ಯಾರ್ಥಿಯನ್ನು ವೇದಿಕೆಗೆ ಕರೆದು ಕಾಲರ್ ಹಿಡಿದು ಅವಮಾನ
"ಅಬೇ ಜಲ್ದಿ ಬೋಲ್......"

ಅಹಮದಾಬಾದ್: ಸ್ಟ್ಯಾಂಡ್ ಅಪ್ ಕಾಮಿಡಿಯನ್ ರಜತ್ ಸೂದ್ ಭಾಗವಹಿಸಿದ್ದ ಕಾಲೇಜು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ‘ಗೋಲ್ಮಾಲ್-3’ ಚಿತ್ರದ ಡೈಲಾಗ್ ಹೇಳಿದ್ದಕ್ಕೆ ಪ್ರಾಧ್ಯಾಪಕರೊಬ್ಬರು ಆತನನ್ನು ವೇದಿಕೆಗೆ ಕರೆದು ಕಾಲರ್ ಹಿಡಿದ ಘಟನೆ ನಡೆದಿದೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಧ್ಯಾಪಕರ ವರ್ತನೆ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಅಹಮದಾಬಾದ್ ನ ನಿರ್ಮಾ ವಿಶ್ವವಿದ್ಯಾಲಯದಲ್ಲಿ ನಡೆದ ‘ಟೆಕ್ನೋಫೋರಾ 2026’ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ ವಿಭಾಗ ಕಾರ್ಯಕ್ರಮ ಆಯೋಜಿಸಿತ್ತು.
ವೈರಲ್ ಆಗಿರುವ ವೀಡಿಯೊದಲ್ಲಿ ವಿಭಾಗದ ಮುಖ್ಯಸ್ಥ ಡಾ. ಹಿಮಾಂಶು ಪಟೇಲ್ ಅವರು ವೇದಿಕೆಯಲ್ಲಿ ಮಾತನಾಡುತ್ತಿರುವುದು ಕಾಣಿಸುತ್ತದೆ. ಅವರು ಮಾತನಾಡುವುದನ್ನು ಮುಂದುವರಿಸಲು ಸಿದ್ಧರಾಗುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ‘ಗೋಲ್ಮಾಲ್-3’ ಚಿತ್ರದ ‘ಜಲ್ದಿ ಬೋಲ್, ಕಲ್ ಸುಭಹ್ ಪನ್ವೇಲ್ ನಿಕಲ್ನಾ ಹೈ’ ಎಂಬ ಡೈಲಾಗ್ ಹೇಳಿದ್ದಾನೆ.
ಇದಕ್ಕೆ ಪ್ರಾಧ್ಯಾಪಕರು ‘ತೋ ನಿಕಲ್ ಲೇ ಭಾಯ್’ ಎಂದು ಪ್ರತಿಕ್ರಿಯಿಸಿದ್ದಾರೆ. ಬಳಿಕ ವಿದ್ಯಾರ್ಥಿಯನ್ನು ವೇದಿಕೆಗೆ ಬರುವಂತೆ ಕರೆದಿದ್ದಾರೆ. ವಿದ್ಯಾರ್ಥಿ ವೇದಿಕೆಗೆ ಬಂದಾಗ ಪ್ರಾಧ್ಯಾಪಕರು ಆತನ ಕಾಲರ್ ಹಿಡಿದಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ.
ಕಾಲರ್ ಹಿಡಿದ ಸಂದರ್ಭದಲ್ಲಿ ಪ್ರಾಧ್ಯಾಪಕರು, “ನಿನ್ನ ಸಮಸ್ಯೆ ಏನು? ನಿರ್ಮಾ ವಿಶ್ವವಿದ್ಯಾಲಯದ ಯಾವುದೇ ಬೋಧಕರನ್ನು ಅವಮಾನಿಸುವ ಧೈರ್ಯ ಮಾಡಿದರೆ ನೀನು ಶಾಶ್ವತವಾಗಿ ಹೊರಗೆ” ಎಂಬರ್ಥದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಡಾ. ಹಿಮಾಂಶು ಪಟೇಲ್ ಅವರು ನಿರ್ಮಾ ವಿಶ್ವವಿದ್ಯಾಲಯದಲ್ಲಿ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ.
►ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ
ವೀಡಿಯೊ ವೈರಲ್ ಆದ ಬಳಿಕ ಪ್ರಾಧ್ಯಾಪಕರ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ವಿದ್ಯಾರ್ಥಿ ಅಶಿಸ್ತು ತೋರಿಸಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನು ಕೆಲವರು ವಿದ್ಯಾರ್ಥಿಯೊಂದಿಗೆ ಈ ರೀತಿ ನಡೆದುಕೊಳ್ಳುವ ಬದಲು ವಿಷಯವನ್ನು ಖಾಸಗಿಯಾಗಿ ಮತ್ತು ವೃತ್ತಿಪರವಾಗಿ ಬಗೆಹರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
“ವಿದ್ಯಾರ್ಥಿಗಳನ್ನು ಗೌರವದಿಂದ ನಡೆಸಿಕೊಂಡರೆ ಅವರು ಕೂಡ ಪ್ರಾಧ್ಯಾಪಕರನ್ನು ಗೌರವಿಸುತ್ತಾರೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು, “ಪ್ರಾಧ್ಯಾಪಕರು ಅಶಿಸ್ತನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಅದಕ್ಕೆ ಶಿಕ್ಷೆ ಇರಬೇಕು” ಎಂದು ಹೇಳಿದ್ದಾರೆ.
ಇನ್ನೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರ, ಯುವ ಪೀಳಿಗೆಯೊಂದಿಗೆ ಬೆರೆಯುವ ರೀತಿಯಲ್ಲೂ ಬದಲಾವಣೆ ಅಗತ್ಯವಿದೆ. ಯಾವುದಾದರೂ ಮಾತಿನಿಂದ ನೋವಾಗಿದ್ದರೆ ಅದನ್ನು ವೃತ್ತಿಪರವಾಗಿ ನಿಭಾಯಿಸಬೇಕಿತ್ತು ಎಂದು ಹೇಳಿದ್ದಾರೆ.
ವಿದ್ಯಾರ್ಥಿಯ ಕಾಲರ್ ಹಿಡಿದಿರುವ ದೃಶ್ಯವೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಯ ಪ್ರತಿಕ್ರಿಯೆ ಅಥವಾ ವಿಶ್ವವಿದ್ಯಾಲಯದ ಅಧಿಕೃತ ಹೇಳಿಕೆ ಲಭ್ಯವಾಗಿಲ್ಲ.






