ಒಡಿಶಾ | ಬಾಲಸೋರ್ ಘಟನೆ ಬೆನ್ನಲ್ಲೇ ಮತ್ತೋರ್ವ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಿಸಿದ ವಿದ್ಯಾರ್ಥಿನಿ

ಸಾಂದರ್ಭಿಕ ಚಿತ್ರ | PC : freepik.com
ಸಂಬಲ್ಪುರ: ಒಡಿಶಾದ ಬಾಲಸೋರ್ನಲ್ಲಿ ವಿದ್ಯಾರ್ಥಿನಿಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಖಂಡಿಸಿ ಒಡಿಶಾದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ ಮಧ್ಯೆ ಪಶ್ಚಿಮ ಒಡಿಶಾದ ಸಂಬಲ್ಪುರದ ಗಂಗಾಧರ್ ಮೆಹರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನೋರ್ವನ ವಿರುದ್ಧ ವಿದ್ಯಾರ್ಥಿನಿಯೋರ್ವಳು ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದಾರೆ.
ಪ್ರಾಧ್ಯಾಪಕ ಗೋಪಿಚಂದ್ ಸುನಾ ಸರಕಾರಿ ವಸತಿಗೃಹಕ್ಕೆ ಕರೆದೊಯ್ದು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತ ವಿದ್ಯಾರ್ಥಿನಿಯ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಸೋರ್ನ ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನ ಬಿಎಡ್ ವಿದ್ಯಾರ್ಥಿನಿ ಪ್ರಾಧ್ಯಾಪಕನೋರ್ವನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಘಟನೆ ರಾಜ್ಯದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.





