SIR ವಿರುದ್ಧ ಪ್ರತಿಭಟನೆ: CJP ಜೊತೆ ಕೈಜೋಡಿಸಿದ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಪತಿ ಪರಕಾಲ ಪ್ರಭಾಕರ್

ನಿರ್ಮಲಾ ಸೀತಾರಾಮನ್ , ಪರಕಾಲ ಪ್ರಭಾಕರ್ | Photo Credit : PTI
ಹೊಸದಿಲ್ಲಿ, ಅ.22: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಹಾಗೂ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಅವರು ಅ.23ರಂದು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರೋಧಿಸಿ ನಡೆಯಲಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಎಸ್ಐಆರ್ ರದ್ದತಿ ಮತ್ತು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಪೀಪಲ್ ಅಗೇನಸ್ಟ್ ಎಸ್ಐಆರ್’ ಮೈತ್ರಿಕೂಟ ಈ ಪ್ರತಿಭಟನೆಯನ್ನು ಆಯೋಜಿಸಿದೆ. ಇದರಲ್ಲಿ ಪ್ರಭಾಕರ್ ಅವರು ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ, ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ, ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಮತ್ತು ರೈತ ಮುಖಂಡ ರಾಕೇಶ್ ಟಿಕಾಯತ್ ಮುಂತಾದವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಅ.8ರಂದು ಬೆಂಗಳೂರಿನಲ್ಲಿ ನಡೆದಿದ್ದ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರಭಾಕರ್, ಎಸ್ಐಆರ್ ಪ್ರಕ್ರಿಯೆಯನ್ನು ಪೌರತ್ವದ ರಕ್ತರಹಿತ ರಾಜಕೀಯ ನರಮೇಧ ಎಂದು ಬಣ್ಣಿಸಿದ್ದರು. ಅರ್ಹ ಮತದಾರರನ್ನು ಮತದಾನದಿಂದ ವಂಚಿತರನ್ನಾಗಿ ಮಾಡುವ ಈ ಪ್ರಕ್ರಿಯೆಯು ನಾಗರಿಕರಲ್ಲಿ ಎರಡು ವರ್ಗಗಳನ್ನು ಸೃಷ್ಟಿಸುತ್ತದೆ ಎಂದು ಅವರು ಎಚ್ಚರಿಸಿದ್ದರು.




