ದಿಲ್ಲಿಯಲ್ಲಿ ಪ್ರತಿಭಟನೆ | ವಶಕ್ಕೆ ಪಡೆದವರನ್ನು ತಕ್ಷಣ ಬಿಡುಗಡೆ ಮಾಡಿ: ವಿಶ್ವಸಂಸ್ಥೆ ಆಗ್ರಹ
ಪ್ರತಿಭಟನಾಕಾರರ ಸಾಮೂಹಿಕ ವಶಕ್ಕೆ ಕಳವಳ; ಶಾಂತಿಯುತ ಪ್ರತಿಭಟನೆಯ ಹಕ್ಕು ಗೌರವಿಸಲು ಸೂಚನೆ

Photo: x.com/AJEnglish
ಹೊಸದಿಲ್ಲಿ, ಅ. 11: ದಿಲ್ಲಿಯಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನೆಗೂ ಮುನ್ನ ಮತ್ತು ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು, ಚಳವಳಿಯ ನಾಯಕರು, ನಾಗರಿಕ ಸಮಾಜದ ಸದಸ್ಯರು, ವಕೀಲರು ಹಾಗೂ ಪತ್ರಕರ್ತರನ್ನು ಸಾಮೂಹಿಕವಾಗಿ ವಶಕ್ಕೆ ಪಡೆಯಲಾಗಿದೆ ಎಂಬ ವರದಿಗಳ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ (OHCHR) ಕಳವಳ ವ್ಯಕ್ತಪಡಿಸಿದೆ. ಸಮರ್ಥನೀಯ ಕಾರಣವಿಲ್ಲದೆ ವಶಕ್ಕೆ ಪಡೆದವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.
ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಸಂಪೂರ್ಣವಾಗಿ ಗೌರವಿಸಿ, ಅದನ್ನು ಖಾತರಿಪಡಿಸಬೇಕು ಎಂದು OHCHR ವಕ್ತಾರ ತಮೀನ್ ಅಲ್-ಖೀತನ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
‘ಶಾಂತಿಯುತ ಪ್ರತಿಭಟನೆಗಳ ಮೇಲಿನ ನಿರ್ಬಂಧಗಳು ಅಗತ್ಯತೆ ಮತ್ತು ಪ್ರಮಾಣಬದ್ಧತೆಯ ಕಠಿಣ ಮಾನದಂಡಗಳನ್ನು ಪೂರೈಸಬೇಕು’ ಎಂದು ಅವರು ಹೇಳಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳು ಹಾಗೂ ಮಾನವ ಹಕ್ಕುಗಳ ಬದ್ಧತೆಗಳಿಗೆ ಅನುಗುಣವಾಗಿ, ಶಾಂತಿಯುತ ಪ್ರತಿಭಟನಾಕಾರರೊಂದಿಗೆ ವ್ಯವಹರಿಸುವಾಗ ಕಾನೂನು ಜಾರಿ ಅಧಿಕಾರಿಗಳು ಅತ್ಯಂತ ಸಂಯಮದಿಂದ ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಚಳವಳಿಯ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.
ನಕಲಿ ಹಾಗೂ ದೋಷಪೂರಿತ ನಮೂದುಗಳನ್ನು ತೆಗೆದುಹಾಕುವ ಉದ್ದೇಶದಿಂದ ರಾಷ್ಟ್ರೀಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚುನಾವಣಾ ಆಯೋಗ ಕೈಗೊಂಡಿರುವ ಕ್ರಮವನ್ನು ಪ್ರತಿಭಟನಾಕಾರರು ಟೀಕಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕೋಟ್ಯಂತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಅಧಿಕಾರದಲ್ಲಿ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಚಳವಳಿಯು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಸ್ಥಳದಲ್ಲಿ ಸಭೆ ಸೇರಲು ಪೊಲೀಸರು ಅನುಮತಿ ನಿರಾಕರಿಸಿದ್ದರು. ಪ್ರತಿಭಟನೆಗೂ ಮುನ್ನ ಮತ್ತು ಪ್ರತಿಭಟನೆಯ ಸಂದರ್ಭದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದ್ದು, ಹಲವು ರಸ್ತೆಗಳನ್ನು ಬಂದ್ ಮಾಡಲಾಗಿತ್ತು ಎಂದು ವರದಿಗಳು ತಿಳಿಸಿವೆ. ವಶಕ್ಕೆ ಪಡೆದವರಲ್ಲಿ ಚಳವಳಿಯ ನಾಯಕರೂ ಸೇರಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಸಮರ್ಥನೀಯ ಕಾರಣವಿಲ್ಲದೆ ವಶಕ್ಕೆ ಪಡೆದವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅಲ್-ಖೀತನ್ ಆಗ್ರಹಿಸಿದ್ದಾರೆ. ಪ್ರತಿಭಟನಾಕಾರರು ಎತ್ತಿರುವ ಕಳವಳಗಳನ್ನು ಪರಿಹರಿಸಲು ಅಧಿಕಾರಿಗಳು ಅರ್ಥಪೂರ್ಣ ಅವರ ಮಾತುಗಳನ್ನು ಆಲಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.






