Pune | ತಾಂತ್ರಿಕ ದೋಷ: 192 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಸಾಂದರ್ಭಿಕ ಚಿತ್ರ (Photo: PTI)
ಪುಣೆ: ಲ್ಯಾಂಡಿಂಗ್ ಗೇರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಟೇಕ್ಆಫ್ ಆದ ಕೆಲವೇ ಸಮಯದಲ್ಲಿ ಪುಣೆ ವಿಮಾನ ನಿಲ್ದಾಣಕ್ಕೆ ಮರಳಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಎಲ್ಲಾ 192 ಮಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಇಂಡಿಗೋದ 6E 0623 (VT-IZE) ವಿಮಾನವು ಪುಣೆಯಿಂದ ಗುವಾಹಟಿಗೆ ಪ್ರಯಾಣಿಸುತ್ತಿತ್ತು. ಟೇಕ್ಆಫ್ ಆದ ಸ್ವಲ್ಪ ಸಮಯದ ಬಳಿಕ ವಿಮಾನದ ಲ್ಯಾಂಡಿಂಗ್ ಗೇರ್ ನಲ್ಲಿ ತಾಂತ್ರಿಕ ದೋಷ ಇರುವುದನ್ನು ಪೈಲಟ್ ಗಮನಿಸಿದ್ದಾರೆ. ತಕ್ಷಣವೇ ಈ ವಿಷಯವನ್ನು ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ (ATC) ತಿಳಿಸಿದ್ದಾರೆ.
ಮಾಹಿತಿ ಲಭಿಸಿದ ಕೂಡಲೇ ಪುಣೆ ವಿಮಾನ ನಿಲ್ದಾಣದ ಅಧಿಕಾರಿಗಳು, ATC, ಇಂಡಿಗೋ ಮತ್ತು ಇತರ ಸಂಬಂಧಿತ ಸಂಸ್ಥೆಗಳು ಸಮನ್ವಯದಿಂದ ಕಾರ್ಯಪ್ರವೃತ್ತವಾಗಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಅಗ್ನಿಶಾಮಕ ವಾಹನಗಳು, ಆಂಬುಲೆನ್ಸ್ಗಳು ಹಾಗೂ ತುರ್ತು ರಕ್ಷಣಾ ತಂಡಗಳ ವ್ಯವಸ್ಥೆಯನ್ನು ಮಾಡಲಾಯಿತು.
ವಿಮಾನದ ಲ್ಯಾಂಡಿಂಗ್ ಗೇರ್ನ ಸ್ಥಿತಿಯನ್ನು ಪರಿಶೀಲಿಸಲು ಪೈಲಟ್ ವಿಮಾನವನ್ನು ರನ್ವೇ ಮೇಲಿನಿಂದ ಕೆಳಮಟ್ಟದಲ್ಲಿ ಹಾರಿಸಿದರು. ಪರಿಶೀಲನೆಯ ಬಳಿಕ ಬೆಳಿಗ್ಗೆ 9.04ಕ್ಕೆ ವಿಮಾನವು ಪುಣೆ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.
ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ಬೆಂಗಳೂರಿನಿಂದ ಮತ್ತೊಂದು ವಿಮಾನವನ್ನು ಪುಣೆಗೆ ತರಲು ಇಂಡಿಗೋ ವ್ಯವಸ್ಥೆ ಮಾಡುತ್ತಿದೆ. ಈ ಪರ್ಯಾಯ ವಿಮಾನದ ಮೂಲಕ ಪ್ರಯಾಣಿಕರನ್ನು ಗುವಾಹಟಿಗೆ ಕಳುಹಿಸಲು ಯೋಜಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಇಂಡಿಗೋ ಸಂಸ್ಥೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.







