Pune | ಕೇತನ್ ಹತ್ಯೆಗೂ ಮುನ್ನ ಬೆಂಗಳೂರಿನಲ್ಲಿ ‘ಕೈಕಾಲು ಮುರಿಯುವ’ ಸಂಚು!

ಮೃತ ಕೇತನ್ ಅಗರ್ವಾಲ್ | ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ (Photo source: NDTV )
ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಹತ್ಯೆ ಮಾಡುವ ಮೊದಲು ಬೆಂಗಳೂರಿಗೆ ಕರೆತಂದು ಕೈಕಾಲು ಮುರಿಯಲು ಆರೋಪಿಗಳು ಯೋಜಿಸಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಯೋಜನೆಗೆ ವಿರೋಧ ವ್ಯಕ್ತವಾದ ಬಳಿಕ ಕೇತನ್ ಅವರನ್ನು ಹತ್ಯೆ ಮಾಡಲು ನಿರ್ಧರಿಸಲಾಗಿತ್ತು ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಸಲ್ಲಿಸಿರುವ 5,053 ಪುಟಗಳ ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಕೇತನ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಪುಣೆಯ ಲೋಹಗಢ ಕೋಟೆಯಿಂದ ಕಣಿವೆಗೆ ತಳ್ಳಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಸಿಯಾ ಮತ್ತು ಚೇತನ್ ಜತೆಗೆ ರಿತೇಶ್ ಹಂಗೆ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.
25 ವರ್ಷದ ಕೇತನ್ ಮತ್ತು ಸಿಯಾ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನವೆಂಬರ್ ನಲ್ಲಿ ಜೈಪುರದಲ್ಲಿ ಅವರ ವಿವಾಹ ನಿಗದಿಯಾಗಿತ್ತು.
ಬೆಂಗಳೂರಿನಲ್ಲಿ ಮೊದಲ ಸಂಚು
ಕೇತನ್ ಅವರ ಕೈಕಾಲು ಮುರಿಯಲು ಅವರನ್ನು ಬೆಂಗಳೂರಿಗೆ ಕರೆತರುವ ಬಗ್ಗೆ ಸಿಯಾ ಮತ್ತು ಚೇತನ್ ಯೋಜಿಸಿದ್ದರು. ಈ ಕುರಿತು ರಿತೇಶ್ ಹಂಗೆ ಬೆಂಗಳೂರಿನಲ್ಲಿದ್ದ ಸ್ನೇಹಿತನೊಬ್ಬನೊಂದಿಗೆ ಚರ್ಚಿಸಿದ್ದ. ಆದರೆ, ಆ ಸ್ನೇಹಿತ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಬಳಿಕ ಕೇತನ್ ಅವರನ್ನು ಹತ್ಯೆ ಮಾಡಲು ಆರೋಪಿಗಳು ನಿರ್ಧರಿಸಿದ್ದರು. ಹತ್ಯೆಯ ವಿಧಾನ ಕುರಿತು ಸಿದ್ಧತೆ ನಡೆಸಲು ಕೊಲೆಗೆ ಸಂಬಂಧಿಸಿದ ಸಿನಿಮಾ ವೀಕ್ಷಿಸಿದ್ದರು. ಕೊಲೆಯ ಯೋಜನೆ ರೂಪಿಸಲು ‘ಚಾಟ್ಜಿಪಿಟಿ’ಯನ್ನೂ ಬಳಸಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳುವ ಕುರಿತು ತಿಳಿದುಕೊಳ್ಳಲು ಪಾಡ್ಕಾಸ್ಟ್ ಗಳನ್ನೂ ಆಲಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
‘ಮಾಹಿ’ ಹೆಸರಿನಲ್ಲಿ ನಕಲಿ ಖಾತೆ:
ಕೇತನ್ ಅವರನ್ನು ಲೋಹಗಢ ಕೋಟೆಗೆ ಕರೆಸಿಕೊಳ್ಳಲು ಆರೋಪಿಗಳು ‘ಮಾಹಿ’ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿದ್ದರು. ಆರೋಪಿಗಳಿಗೆ ಪರಿಚಯವಿದ್ದ ಮಹಿಳೆಯೊಬ್ಬರ ಫೋಟೋವನ್ನು ಇದಕ್ಕಾಗಿ ಬಳಸಲಾಗಿತ್ತು.
ಈ ಖಾತೆಯಿಂದ ಕೇತನ್ ಗೆ ಸಂದೇಶ ಕಳುಹಿಸಿ, ಸಿಯಾ ಜತೆ ಸೇರಿ ಹುಟ್ಟುಹಬ್ಬದ ಅಚ್ಚರಿ ಕಾರ್ಯಕ್ರಮ ನಡೆಸುವ ನೆಪದಲ್ಲಿ ಜೂನ್ 18ರಂದು ಲೋಹಗಢ ಕೋಟೆಗೆ ಬರುವಂತೆ ನಂಬಿಸಲಾಗಿತ್ತು. ರಿತೇಶ್ ಹಂಗೆ ರೂಪಿಸಿದ್ದ ಯೋಜನೆಯ ಭಾಗವಾಗಿಯೇ ಈ ಖಾತೆ ಸೃಷ್ಟಿಸಲಾಗಿತ್ತು. ಘಟನೆ ಬಳಿಕ ಖಾತೆಯನ್ನು ಅಳಿಸಲಾಯಿತು.
ಪಾಸ್ಪೋರ್ಟ್ ಹರಿದುಹಾಕಿದ ಆರೋಪ
ಜೂನ್ 6ರಂದು ಮದುವೆಗೂ ಮುನ್ನದ ಫೋಟೋಶೂಟ್ ಗೆ ತೆರಳುತ್ತಿದ್ದಾಗ ಸಿಯಾ, ಕೇತನ್ ಅವರ ಪಾಸ್ಪೋರ್ಟ್ ಹರಿದು ಕೆಫೆಯೊಂದರ ಶೌಚಾಲಯದಲ್ಲಿ ಎಸೆದಿದ್ದಳು ಎಂದು ಆರೋಪಿಸಲಾಗಿದೆ. ಇದರಿಂದ ಪ್ರವಾಸ ರದ್ದಾಗಿತ್ತು. ಪಾಸ್ಪೋರ್ಟ್ ಹರಿಯುವ ಆಲೋಚನೆ ಚೇತನ್ ನದ್ದಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
‘ಮದುವೆಯಾಗಲು ನನಗೆ ಇಷ್ಟವಿಲ್ಲ’ ಎಂದಿದ್ದ ಸಿಯಾ
ಕೇತನ್ ಅವರನ್ನು ಮದುವೆಯಾಗಲು ಸಿಯಾಗೆ ಇಷ್ಟವಿರಲಿಲ್ಲ ಎಂಬುದೂ ದೋಷಾರೋಪ ಪಟ್ಟಿಯಿಂದ ತಿಳಿದುಬಂದಿದೆ. ಈ ವಿಚಾರವನ್ನು ಆಕೆ ಹಲವು ಮಂದಿಯೊಂದಿಗೆ ಹೇಳಿಕೊಂಡಿದ್ದಳು ಎನ್ನಲಾಗಿದೆ.
ಸಿಯಾ ಮತ್ತು ಆಕೆಯ ಸ್ನೇಹಿತೆಯ ನಡುವಿನ ಸ್ನ್ಯಾಪ್ಚಾಟ್ ಸಂಭಾಷಣೆಯಲ್ಲೂ ಈ ಕುರಿತು ಮಾಹಿತಿ ಸಿಕ್ಕಿದೆ. ವಿಮಾನದ ಟಿಕೆಟ್ ಕಾಯ್ದಿರಿಸಲು ಸ್ನೇಹಿತೆಯ ಆಧಾರ್ ಕಾರ್ಡ್ನ ಪ್ರತಿಯನ್ನು ಕಳುಹಿಸುವಂತೆ ಸಿಯಾ ಕೇಳಿದ್ದಳು ಎನ್ನಲಾಗಿದೆ. ‘ಎಂದಿಗೂ ನಡೆಯದ ಮದುವೆಗಾಗಿ ಟಿಕೆಟ್ಗಳನ್ನು ಕಾಯ್ದಿರಿಸಲು ನಿನ್ನ ಆಧಾರ್ ಕಾರ್ಡ್ ಅನ್ನು ನನಗೆ ಕಳುಹಿಸು’ ಎಂದು ಸಿಯಾ ಹೇಳಿದ್ದಾಗಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಕೇತನ್ ಅವರನ್ನು ಲೋಹಗಢ ಕೋಟೆಯಿಂದ ಕೆಳಗೆ ತಳ್ಳುವುದನ್ನು ತಾನು ನೋಡಿದ್ದಾಗಿ ಗುರುತು ಬಹಿರಂಗಪಡಿಸದ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.
ಈ ವಿಷಯವನ್ನು ಬಹಿರಂಗಪಡಿಸಿದರೆ ತನಗೂ ಇದೇ ಗತಿ ಬರುತ್ತದೆ ಎಂದು ಚೇತನ್ ಆ ವ್ಯಕ್ತಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ‘ಸುಮ್ಮನಿರು, ಇಲ್ಲದಿದ್ದರೆ ನಿನ್ನನ್ನೂ ಕೋಟೆಯಿಂದ ಕೆಳಗೆ ಎಸೆಯುತ್ತೇನೆ’ ಎಂದು ಚೇತನ್ ಬೆದರಿಸಿದ್ದಾಗಿ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಪ್ರಕರಣದ ಮಾಧ್ಯಮ ವರದಿಗಳನ್ನು ನೋಡಿದ ಬಳಿಕ ಭಯಗೊಂಡ ಪ್ರತ್ಯಕ್ಷದರ್ಶಿಯು, ಹತ್ಯೆ ನಡೆದ ಐದು ದಿನಗಳ ಬಳಿಕ ಪೊಲೀಸರನ್ನು ಸಂಪರ್ಕಿಸಿ ಹೇಳಿಕೆ ದಾಖಲಿಸಿದ್ದಾರೆ.
ಪ್ರತ್ಯಕ್ಷದರ್ಶಿ, ನೇಲ್ ಆರ್ಟ್ ಕಲಾವಿದ ಸೇರಿದಂತೆ ಹಲವು ವ್ಯಕ್ತಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.
ಈ ಪ್ರಕರಣದಲ್ಲಿ ಹಿರಿಯ ವಕೀಲ ಉಜ್ವಲ್ ನಿಕಮ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸುವ ಸಾಧ್ಯತೆಯಿದೆ.






