ಪಂಜಾಬ್: 2027 ರ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸಹ ಅಧ್ಯಕ್ಷ ಬಿಜೆಪಿ ಸೇರ್ಪಡೆ

ಹರ್ದಿಯಾಲ್ ಸಿಂಗ್ ಕಾಂಬೋಜ್ |Photo Credit : PTI
ಚಂಡೀಗಢ: 2027ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ಬಾರೀ ಹಿನ್ನಡೆಯಾಗಿದ್ದು, ಎರಡು ಬಾರಿ ಶಾಸಕರಾಗಿದ್ದ ಹಿರಿಯ ನಾಯಕ ಹರ್ದಿಯಾಲ್ ಸಿಂಗ್ ಕಾಂಬೋಜ್ ಗುರುವಾರ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ರಾಜಪುರಾ ಕ್ಷೇತ್ರವನ್ನು 2012 ಮತ್ತು 2017ರಲ್ಲಿ ಪ್ರತಿನಿಧಿಸಿದ್ದ ಕಾಂಬೋಜ್, 2027ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ರಚಿಸಿದ್ದ ಪ್ರಣಾಳಿಕೆ ಸಮಿತಿಯ ಸಹ ಅಧ್ಯಕ್ಷರಾಗಿದ್ದರು. ಚಂಡೀಗಢದಲ್ಲಿರುವ ಬಿಜೆಪಿ ಪಂಜಾಬ್ ಘಟಕದ ಕಚೇರಿಯಲ್ಲಿ ಹರ್ಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಮತ್ತು ಪಂಜಾಬ್ ಬಿಜೆಪಿ ಅಧ್ಯಕ್ಷ ಕೇವಲ್ ಸಿಂಗ್ ಧಿಲ್ಲೋನ್ ಸಮ್ಮುಖದಲ್ಲಿ ಅವರು ಪಕ್ಷ ಸೇರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಬೋಜ್, “ಗ್ಯಾಂಗ್ಸ್ಟರ್ಗಳ ಹಾವಳಿ, ಭ್ರಷ್ಟಾಚಾರ, ಲೂಟಿ ಮತ್ತು ದಬ್ಬಾಳಿಕೆಯಿಂದ ಪಂಜಾಬ್ ಅನ್ನು ರಕ್ಷಿಸುವ ಉದ್ದೇಶದಿಂದ ನಾನು ಮತ್ತು ನನ್ನ ಬೆಂಬಲಿಗರು ಬಿಜೆಪಿ ಸೇರಲು ನಿರ್ಧರಿಸಿದ್ದೇವೆ” ಎಂದರು.
ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತರಿಗೆ ಸೂಕ್ತ ಗೌರವ ದೊರೆಯುತ್ತದೆ. ತಮ್ಮ ತಂಡವು ಶಿಸ್ತಿನ ಘಟಕವಾಗಿ ಕೆಲಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಲಿದೆ ಎಂದು ಅವರು ಹೇಳಿದರು.
1998ರಿಂದ 2018ರವರೆಗೆ ಪಟಿಯಾಲ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯ, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾಗಿ ಹಾಗೂ ಪಂಜಾಬ್ ವೇರ್ಹೌಸಿಂಗ್ ಕಾರ್ಪೊರೇಷನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಇದಕ್ಕೂ ಮುನ್ನ ಗುರುವಾರದಂದು, ಶಿರೋಮಣಿ ಅಕಾಲಿದಳ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ಹಲವು ನಾಯಕರು ಮತ್ತು ಬೆಂಬಲಿಗರು ಪಂಜಾಬ್ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.






