Punjab | ಗುರುದಾಸ್‌ಪುರ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು

ಅಮೃತಸರ: ಪಂಜಾಬ್‌ನ ಗುರುದಾಸ್‌ಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಗೆ ಹಿನ್ನಡೆಯಾಗಿದ್ದು, ಇಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ದೀನಾನಗರ ಮತ್ತು ಕ್ವಾಡಿಯನ್ ಪಾಲಿಕೆಗಳು ಅತಂತ್ರವಾಗಿವೆ.
ಮೇ 26ರಂದು ಪಂಜಾಬ್ ರಾಜ್ಯಾದ್ಯಂತ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ತದ್ವಿರುದ್ಧ ಫಲಿತಾಂಶ ಬಂದಿದೆ. ಮೇ 26ರ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಸ್ಪರ್ಧಿಸಿದ್ದ ಎಂಟು ಮಹಾನಗರ ಪಾಲಿಕೆಗಳು ಸೇರಿದಂತೆ 102 ನಗರ ಸ್ಥಳೀಯ ಸಂಸ್ಥೆಗಳ 1,977 ವಾರ್ಡ್‌ಗಳ ಪೈಕಿ 958ರಲ್ಲಿ ಜಯ ಸಾಧಿಸಿತ್ತು.
ಗುರುದಾಸ್‌ಪುರ ಮಹಾನಗರ ಪಾಲಿಕೆಯ 29 ವಾರ್ಡ್‌ಗಳ ಪೈಕಿ ಕಾಂಗ್ರೆಸ್ ಪಕ್ಷ 21 ವಾರ್ಡ್‌ಗಳಲ್ಲಿ ಜಯ ಗಳಿಸಿದೆ. ಎಎಪಿ ಏಳು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದು, ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ. ಶಾಸಕ ಬರೀಂದರ್‌ಮೀತ್ ಸಿಂಗ್ ಪಹ್ರಾ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಿತ್ತು. ಅರ್ಹ ಮತದಾರರ ಪೈಕಿ ಶೇಕಡ 60.64 ಮಂದಿ ಮತ ಚಲಾಯಿಸಿದ್ದರು.
ಕಾಂಗ್ರೆಸ್ ಶಾಸಕ ಅರುಣಾ ಚೌಧರಿ ಪ್ರತಿನಿಧಿಸುವ ದೀನಾನಗರದಲ್ಲಿ ಕಾಂಗ್ರೆಸ್ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಎಎಪಿ ಆರು ಹಾಗೂ ಬಿಜೆಪಿ ಒಂದು ಸ್ಥಾನಗಳನ್ನು ಗೆದ್ದು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಶೇಕಡ 64.88ರಷ್ಟು ಮತದಾನವಾಗಿತ್ತು.
ಪಂಜಾಬ್‌ನ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಪ್ರತಿನಿಧಿಸುವ ಕ್ವಾಡಿಯನ್‌ನಲ್ಲಿ ಶಿರೋಮಣಿ ಅಕಾಲಿ ದಳ 15 ವಾರ್ಡ್‌ಗಳ ಪೈಕಿ ಆರನ್ನು ಗೆದ್ದಿದ್ದು, ಅಗತ್ಯ ಸಂಖ್ಯಾಬಲದಿಂದ ಹಿಂದುಳಿದಿದೆ. ಕಾಂಗ್ರೆಸ್ ನಾಲ್ಕು ವಾರ್ಡ್‌ಗಳಲ್ಲಿ ಜಯ ಸಾಧಿಸಿದ್ದು, ಎಎಪಿ ಎರಡು ಹಾಗೂ ಬಿಜೆಪಿ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಇಲ್ಲಿ ಶೇಕಡ 70.95ರಷ್ಟು ಮತದಾನವಾಗಿತ್ತು.






