Uttar Pradesh | PNB ನಗದು ಭಂಡಾರದಲ್ಲಿ 7.4 ಕೋಟಿ ರೂ. ಅಸಲಿ ನೋಟುಗಳ ಬದಲು ನಕಲಿ ನೋಟುಗಳು ಪತ್ತೆ
► ತನಿಖೆಗೆ SIT ರಚನೆ

ಸಾಂದರ್ಭಿಕ ಚಿತ್ರ | Photo Credit : magnific
ಲಕ್ನೊ: ಉತ್ತರ ಪ್ರದೇಶದ ಸಹರಾನ್ಪುರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನ ನಗದು ಭಂಡಾರದಲ್ಲಿದ್ದ ರೂ . 7.4 ಕೋಟಿ ಮೌಲ್ಯದ ಅಸಲಿ ನೋಟುಗಳನ್ನು ನಕಲಿ ನೋಟುಗಳಿಗೆ ಬದಲಾಯಿಸಿರುವ ಭಾರೀ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಅಧಿಕಾರಿಗಳು ಹಾಗೂ ಹೊರಗಿನ ಖಾಸಗಿ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ
ಪಿಎನ್ಬಿ ನೋಡಲ್ ಅಧಿಕಾರಿ ಅರುಣ್ ಕುಮಾರ್ ಚೌಬೆ ನೀಡಿದ ದೂರಿನ ಆಧಾರದ ಮೇಲೆ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಫ್ಐಆರ್ನಲ್ಲಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ರವಿ ಕುಮಾರ್, ಕರೆನ್ಸಿ ಚೆಸ್ಟ್ ಮ್ಯಾನೇಜರ್ಗಳಾದ ಸುಶೀಲ್ ಶರ್ಮಾ ಮತ್ತು ಅಮಿತ್ ಕುಮಾರ್ ಅವರನ್ನು ಪ್ರಮುಖ ಶಂಕಿತರೆಂದು ಹೆಸರಿಸಲಾಗಿದೆ.
ಇದರ ಜತೆಗೆ, ಬ್ಯಾಂಕ್ನ ನಗದು ಕೊರತೆಗೆ ಸಂಬಂಧಿಸಿದಂತೆ ಹೌಸ್ಕೀಪರ್ ವಿಶಾಲ್ ಕುಮಾರ್ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಬಯಲಿಗೆ ಬಂದಿದ್ದು ಹೇಗೆ?
ಆಗಸ್ಟ್ 10ರಂದು ಭಾರತೀಯ ರಿಸರ್ವ್ ಬ್ಯಾಂಕ್ಗೆ (RBI) ಕಳುಹಿಸಲಾದ ನಗದು ಪಾವತಿಯಲ್ಲಿ ರೂ . 4.36 ಲಕ್ಷ ಕೊರತೆ ಕಂಡುಬಂದಾಗ ಈ ವಂಚನೆ ಬೆಳಕಿಗೆ ಬಂದಿದೆ.
ಬಳಿಕ ಆರ್ಬಿಐ ಸೂಚನೆಯಂತೆ ನಡೆಸಿದ ಸಮಗ್ರ ಲೆಕ್ಕಪರಿಶೋಧನೆಯಲ್ಲಿ (ಆಡಿಟ್) ಬ್ಯಾಂಕ್ನ ನಗದು ಭಂಡಾರದೊಳಗೆ ಅಸಲಿ ನೋಟುಗಳ ಬದಲಿಗೆ ನಕಲಿ ನೋಟುಗಳನ್ನು ಇರಿಸಿರುವುದು ಪತ್ತೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಎನ್ಬಿ ಮುಖ್ಯ ಉಪಪ್ರಬಂಧಕಿ ನಿಶಾ ಸಿಂಗ್, “ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಾದ ಬಳಿಕ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು. ನೋಟುಗಳ ಎಣಿಕೆ ಕಾರ್ಯವೂ ಮುಂದುವರಿದಿದ್ದು, ಒಟ್ಟು ನಕಲಿ ನೋಟುಗಳ ಮೌಲ್ಯವನ್ನು ಪರಿಶೀಲಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಸಹರಾನ್ಪುರ ಡಿಐಜಿ ಅಭಿಷೇಕ್, “ತನಿಖೆಗಾಗಿ ಎಸ್ಐಟಿ ರಚಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ದುರುಪಯೋಗಪಡಿಸಿಕೊಂಡ ಹಣವನ್ನು ವಶಪಡಿಸಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ನಗದು ಭಂಡಾರಕ್ಕೆ ನಕಲಿ ನೋಟುಗಳನ್ನು ಹೇಗೆ ತರಲಾಯಿತು ಮತ್ತು ಈ ವಂಚನೆಯಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಬ್ಯಾಂಕ್ ವಹಿವಾಟು ದಾಖಲೆಗಳು, ಆಡಿಟ್ ಲೆಡ್ಜರ್ಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.






