ಪಾಕಿಸ್ತಾನದ ಐಎಸ್ಐಗೆ ಸೇನಾ ರಹಸ್ಯ ಮಾಹಿತಿ ಸೋರಿಕೆ ಆರೋಪ: ಪಂಜಾಬ್ ನಲ್ಲಿ ಯೋಧ ರಾಜ್ಬೀರ್ ಸಿಂಗ್ ಬಂಧನ

ಸಾಂದರ್ಭಿಕ ಚಿತ್ರ (AI Generated)
ಕೋಲ್ಕತ್ತಾ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಗೂಢಚರ್ಯೆ ನಡೆಸಿ, ಭಾರತದ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ ಆರೋಪದ ಮೇಲೆ ಭಾರತೀಯ ಸೇನೆಯ ಯೋಧನೊಬ್ಬನನ್ನು ಪಂಜಾಬ್ ಪೊಲೀಸರು ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಬಂಧಿತನನ್ನು ಪಂಜಾಬ್ ನಿವಾಸಿ ರಾಜ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಗುರುವಾರ ಹಸಿಮಾರಾ ಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಸೇನಾ ನೆಲೆಗಳು ಹಾಗೂ ಇತರ ಸೂಕ್ಷ್ಮ ಸೇನಾ ಮಾಹಿತಿಗಳಿಗೆ ಸಂಬಂಧಿಸಿದ ಗೌಪ್ಯ ವಿವರಗಳನ್ನು ಆತ ಐಎಸ್ಐ ಜೊತೆ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಅಕ್ಟೋಬರ್ 8ರಂದು ಪಂಜಾಬ್ನ ಫಾಜಿಲ್ಕಾ ಪೊಲೀಸ್ ಠಾಣೆಯಲ್ಲಿ ಅಧಿಕೃತ ರಹಸ್ಯ ಕಾಯ್ದೆ (Official Secrets Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಶುಕ್ರವಾರ ರಾಜ್ಬೀರ್ ಸಿಂಗ್ನನ್ನು ಸಿಲಿಗುರಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪಂಜಾಬ್ಗೆ ಕರೆದೊಯ್ಯಲು ಟ್ರಾನ್ಸಿಟ್ ರಿಮಾಂಡ್ ಕೋರಲಾಯಿತು. ತನಿಖೆ ಆರಂಭವಾದಾಗಿನಿಂದ ಆರೋಪಿ ತಲೆಮರೆಸಿಕೊಂಡಿದ್ದ ಎಂದು ಸರಕಾರಿ ಪರ ವಕೀಲ ಸೌಮಿತ್ರ ಸಿಂಗ್ ಸರ್ಕಾರ್ ತಿಳಿಸಿದ್ದಾರೆ.
ವಾದ ಆಲಿಸಿದ ನ್ಯಾಯಾಲಯವು ಆರೋಪಿಯನ್ನು ಪಂಜಾಬ್ಗೆ ಕರೆದೊಯ್ಯಲು ಪೊಲೀಸರಿಗೆ ಎರಡು ದಿನಗಳ ಟ್ರಾನ್ಸಿಟ್ ರಿಮಾಂಡ್ ನೀಡಿದೆ.
ನ್ಯಾಯಾಲಯದ ನಿರ್ದೇಶನದಂತೆ ನವೆಂಬರ್ 1ರಂದು ಫಾಜಿಲ್ಕಾದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ರಾಜ್ಬೀರ್ ಸಿಂಗ್ನನ್ನು ಹಾಜರುಪಡಿಸಬೇಕಿದೆ.






