ಪಿನಾಕಾ ರಾಕೆಟ್ ಸಿಸ್ಟಂಗೆ ಅಸ್ತ್ರ ಖರೀದಿ: 10,200 ಕೋಟಿ ರೂ. ಯೋಜನೆಗೆ ಅಸ್ತು

PC: x.com/Defencecore
ಹೊಸದಿಲ್ಲಿ: ದೇಶಿ ನಿರ್ಮಿತ ಪಿನಾಕಾ ಬಹು ಉಡಾವಣೆ ಶಸ್ತ್ರಾಸ್ತ್ರಯುಕ್ತ ರಾಕೆಟ್ ಸಿಸ್ಟಂಗೆ ಬೇಕಾದ ಅಸ್ತ್ರಗಳನ್ನು ಖರೀದಿಸುವ ಸುಮಾರು 10,200 ಕೋಟಿ ರೂಪಾಯಿ ಅಂದಾಜು ವೆಚ್ಚದ ಎರಡು ಪ್ರಮುಖ ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ.
ಭಯಾನಕ ಸ್ಫೋಟದ ರಾಕೆಟ್ ಶಸ್ತ್ರಾಸ್ತ್ರವನ್ನು 5700 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲಾಗುತ್ತಿದ್ದು, 4500 ಕೋಟಿ ರೂಪಾಯಿ ವೆಚ್ಚದಲ್ಲಿ ಏರಿಯಾ ಡಿನೈಯಲ್ ಮ್ಯುನಿಷನ್ ಗಳನ್ನು ಖರೀದಿಸಲಾಗುತ್ತಿದೆ. ಇದು 10 ಪಿನಾಕಾ ರೆಜಿಮೆಂಟ್ ಗಳಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿರುವ ಶಸ್ತ್ರಾಸ್ತ್ರಗಳು 11 ಲಕ್ಷ ಗಾತ್ರದ ಪ್ರಬಲ ಸೇನೆಗೆ ಪೂರಕವಾಗಲಿದೆ.
ಅತ್ಯಧಿಕ ಸ್ಫೋಟ ಸಾಮರ್ಥ್ಯದ ರಾಕೆಟ್ ಶಸ್ತ್ರಾಸ್ತ್ರಗಳು 45 ಕಿಲೋಮೀಟರ್ ದೂರದ ಗುರಿಯ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದ್ದರೆ, ಡಿನೈಯಲ್ ಮ್ಯುನಿಷನ್ ಗಳು 37 ಕಿಲೋಮೀಟರ್ ದೂರದ ಗುರಿ ತಲುಪಬಹುದಾಗಿದೆ. ಹಲವು ಬಾಂಬ್ಲೆಟ್ ಗಳ ಮೇಲೆ ಗುರಿ ನಿರ್ದೇಶಿತ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಇವುಗಳು ಟ್ಯಾಂಕ್ ನಿರೋಧಕ ಮತ್ತು ಸಿಬ್ಬಂದಿಯ ಮಿನಿಲೆಟ್ ಗಳನ್ನು ಪ್ರತಿರೋಧಿಸುವ ಶಕ್ತಿ ಹೊಂದಿವೆ.
ನಾಗ್ಪುರ ಮೂಲದ ಖಾಸಗಿ ವಲಯದ ಸೌರ ಸಮೂಹ ಮತ್ತು ಸರ್ಕಾರಿ ಸ್ವಾಮ್ಯದ ಮ್ಯುನಿಷನ್ಸ್ ಇಂಡಿಯಾ ಲಿಮಿಟೆಡ್ ಜಂಟಿಯಾಗಿ 60:40 ಅನುಪಾತದಲ್ಲಿ ಈ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲಿವೆ. ಮುಂದಿನ ಕೆಲ ದಿನಗಳಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.







