ಖತರ್ ಏರ್ವೇಸ್ ನಲ್ಲಿ ಸಸ್ಯಹಾರಿ ಪ್ರಯಾಣಿಕನಿಗೆ ಮಾಂಸಹಾರ ನೀಡಿದ ಬಳಿಕ ಮೃತ್ಯು : ಆರೋಪ

ಸಾಂದರ್ಭಿಕ ಚಿತ್ರ
ಲಾಸ್ ಏಂಜಲೀಸ್, ಅ.9: ಸಸ್ಯಾಹಾರಿ ಪ್ರಯಾಣಿಕರೊಬ್ಬರಿಗೆ ಮಾಂಸಾಹಾರ ಊಟ ನೀಡಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟ ಘಟನೆ ಖತರ್ ಏರ್ವೇಸ್ ಹಾರಾಟದ ಸಂದರ್ಭ ನಡೆದಿದೆ. ಈ ಸಂಬಂಧ ನಿರ್ಲಕ್ಷ್ಯ, ತಪ್ಪಾಗಿ ಆಹಾರ ನೀಡಿದ ಆರೋಪದಲ್ಲಿ ಮೊಕದ್ದಮೆ ಹೂಡಲಾಗಿದೆ.
ಕ್ಯಾಲಿಫೋರ್ನಿಯಾದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಅಶೋಕ ಜಯವೀರ (85) ಅವರು 2023ರ ಜೂನ್ 23ರಂದು ಲಾಸ್ ಏಂಜಲೀಸ್ನಿಂದ ಕೊಲಂಬೊಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಪ್ರಯಾಣ ಸುಮಾರು 15 ಗಂಟೆಗಳದ್ದಾಗಿತ್ತು. ಸಸ್ಯಾಹಾರಿ ಆಗಿದ್ದ ಅವರು ಮುಂಚಿತವಾಗಿ ಸಸ್ಯಾಹಾರ ಊಟವನ್ನು ಆರ್ಡರ್ ಮಾಡಿದ್ದರೂ, ವಿಮಾನ ಸಿಬ್ಬಂದಿ ಅವರಿಗೆ ಅದನ್ನು ಪೂರೈಸಲು ವಿಫಲವಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಾ. ಜಯವೀರ ಅವರ ಪುತ್ರ ಸೂರ್ಯ ಜಯವೀರ ಸಲ್ಲಿಸಿದ ಮೊಕದ್ದಮೆಯ ಪ್ರಕಾರ, ಸಿಬ್ಬಂದಿ “ಸಸ್ಯಾಹಾರ ಲಭ್ಯವಿಲ್ಲ” ಎಂದು ಹೇಳಿ ಮಾಂಸಾಹಾರ ಊಟವನ್ನು ನೀಡಿದರು. ಅದನ್ನು ನೀಡುವಾಗ, “ಮಾಂಸವನ್ನು ಸುತ್ತಲೂ ತಿನ್ನಬಹುದು” ಎಂದು ಸಲಹೆ ನೀಡಿದ್ದರು. ಈ ವೇಳೆ ಊಟ ಸೇವಿಸುವಾಗ ಡಾ.ಜಯವೀರ ಉಸಿರುಗಟ್ಟಿ ಅಸ್ವಸ್ಥರಾದರು.
ತಕ್ಷಣ ಸಿಬ್ಬಂದಿ ತುರ್ತು ವೈದ್ಯಕೀಯ ನೆರವು ನೀಡಲು ಪ್ರಯತ್ನಿಸಿದ್ದು, ಮೆಡ್ಏರ್ ಎಂಬ ವಿಮಾನದಲ್ಲಿನ ತುರ್ತು ವೈದ್ಯಕೀಯ ಸೇವೆಯನ್ನು ಸಂಪರ್ಕಿಸಲಾಯಿತು. ಆದರೆ , ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ತುರ್ತು ಲ್ಯಾಂಡಿಂಗ್ ಸಾಧ್ಯವಾಗಲಿಲ್ಲ. ವಿಮಾನವು ಅಂತಿಮವಾಗಿ ಸ್ಕಾಟ್ಲೆಂಡ್ನ ಎಡಿನ್ಬರ್ಗ್ನಲ್ಲಿ ಇಳಿದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಗಸ್ಟ್ 3, 2023ರಂದು ಮೃತಪಟ್ಟರು.
ವೈದ್ಯಕೀಯ ವರದಿ ಪ್ರಕಾರ ಆಸ್ಪಿರೇಷನ್ ನ್ಯುಮೋನಿಯಾ, ಅಂದರೆ ಆಹಾರ ಅಥವಾ ದ್ರವದಿಂದ ಉಂಟಾಗುವ ಉಸಿರಾಡುವಾಗ ಶ್ವಾಸಕೋಶದ ಸೋಂಕು ಈ ಸಾವಿಗೆ ಕಾರಣವಾಗಿದೆ.
ಸೂರ್ಯ ಜಯವೀರ ಅವರು ಖತರ್ ಏರ್ವೇಸ್ ವಿರುದ್ಧ ಕ್ಯಾಲಿಫೋರ್ನಿಯಾ ರಾಜ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಕಂಪೆನಿಯು ಪ್ರಯಾಣಿಕನ ಆರ್ಡರ್ ಮಾಡಿದ ಊಟ ಪೂರೈಸಲು ವಿಫಲವಾಗಿದೆ ಮತ್ತು ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಿದ್ದಾರೆ. ಅವರು ಮಾಂಟ್ರಿಯಲ್ ಕನ್ವೆನ್ಷನ್ ಅಡಿಯಲ್ಲಿ ಕನಿಷ್ಠ ಪರಿಹಾರ ಮೊತ್ತವಾದ 1,28,821 ಡಾಲರುಗಳನ್ನು (ಸುಮಾರು 1.07 ಕೋಟಿ ರೂಪಾಯಿ) ನಷ್ಟದ ಬೇಡಿಕೆ ಇಟ್ಟಿದ್ದಾರೆ.
ದೂರಿನಲ್ಲಿ, “ಖತರ್ ಮತ್ತು ಅಮೆರಿಕ ಎರಡೂ ಮಾಂಟ್ರಿಯಲ್ ಕನ್ವೆನ್ಷನ್ ಸದಸ್ಯ ರಾಷ್ಟ್ರಗಳಾಗಿರುವುದರಿಂದ, ಖತರ್ ಏರ್ವೇಸ್ ಅಂತರರಾಷ್ಟ್ರೀಯ ವಿಮಾನಯಾನಗಳ ವೇಳೆ ಸಂಭವಿಸುವ ಸಾವು ಅಥವಾ ಗಾಯಗಳಿಗೆ ಕಠಿಣ ಹೊಣೆಗಾರಿಕೆಯ ಅಡಿಯಲ್ಲಿ ಬರುತ್ತದೆ” ಎಂದು ಉಲ್ಲೇಖಿಸಲಾಗಿದೆ.







