ಕಡಿಮೆ ವೇತನದ ಬಗ್ಗೆ ಅಳಲು ತೋಡಿಕೊಂಡಿದ್ದ ʼಬ್ಲಿಂಕಿಟ್ʼ ಡೆಲಿವರಿ ಏಜೆಂಟ್; ವಿಡಿಯೋ ವೈರಲ್ ಬೆನ್ನಲ್ಲೇ ಉಪಾಹಾರಕ್ಕೆ ಆಹ್ವಾನಿಸಿದ ಸಂಸದ ರಾಘವ್ ಚಡ್ಡಾ

Screengrab:X/@raghav_chadha
ಹೊಸದಿಲ್ಲಿ: ಅಲ್ಪ ಪ್ರಮಾಣದ ದೈನಂದಿನ ಗಳಿಕೆ ಬಗ್ಗೆ ವೈರಲ್ ವೀಡಿಯೊದಲ್ಲಿ ಹೇಳಿಕೊಂಡು ಗಮನಸೆಳೆದಿದ್ದ ಬ್ಲಿಂಕಿಟ್ ಡೆಲಿವರಿ ಏಜೆಂಟ್ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಗಿಗ್ ಕಾರ್ಮಿಕರ ಕೆಲಸದ ಪರಿಸ್ಥಿತಿಗಳ ಬಗ್ಗೆ ಸಂಸತ್ತಿನಲ್ಲಿ ಚಡ್ಡಾ ಪ್ರಶ್ನೆ ಎತ್ತಿದ ಕೆಲವೇ ದಿನಗಳ ಬಳಿಕ ಈ ಭೇಟಿ ನಡೆದಿದೆ.
ಉತ್ತರಾಖಂಡ ಮೂಲದ ಥಾಪ್ಲಿಯಾಲ್ ಜಿ ಎಂಬ ಡೆಲಿವರಿ ಏಜೆಂಟ್ ಅನ್ನು ಸಂಸದ ರಾಘವ್ ಚಡ್ಡಾ ಅವರು ತಮ್ಮ ನಿವಾಸಕ್ಕೆ ಊಟಕ್ಕೆ ಆಹ್ವಾನಿಸಿದ್ದರು. ರಾಜ್ಯಸಭೆಯಲ್ಲಿ ಸಂಸದರು ಕಡಿಮೆ ವೇತನ, ಅತಿಯಾದ ಕೆಲಸದ ಸಮಯ ಮತ್ತು ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆಯ ಬಗ್ಗೆ ಧ್ವನಿ ಎತ್ತಿದ್ದರು.
ಭೇಟಿ ವೇಳೆ ಥಪ್ಲಿಯಾಲ್ ಜಿ, ಡೆಲಿವರಿ ಏಜೆಂಟ್ಗಳು ಪ್ರತಿದಿನ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಥಪ್ಲಿಯಾಲ್ ಜಿ ವೀಡಿಯೊವೊಂದರಲ್ಲಿ, ಒಂದು ದಿನದಲ್ಲಿ 15 ಗಂಟೆಗಳ ಕಾಲ ಕೆಲಸ ಮಾಡಿ 28 ಡೆಲಿವರಿಗಳನ್ನು ಪೂರ್ಣಗೊಳಿಸಿದರೂ ಕೇವಲ 763ರೂ. ಮಾತ್ರ ಆದಾಯ ದೊರೆತಿದೆ ಎಂದು ಹೇಳಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಈ ಆದಾಯ ನ್ಯಾಯಸಮ್ಮತವೇ ಎಂದು ಹಲವರು ಪ್ರಶ್ನಿಸಿದ್ದರು.







