Blinkit ಗಿಗ್ ಕಾರ್ಮಿಕರೊಂದಿಗೆ ದಿನ ಕಳೆದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ

ರಾಘವ್ ಚಡ್ಡಾ | Photo Credit : @raghav_chadha
ಹೊಸದಿಲ್ಲಿ: ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಒಂದು ದಿನದ ಮಟ್ಟಿಗೆ ಬ್ಲಿಂಕಿಟ್ ವಿತರಣಾ ರೈಡರ್ ಆಗಿ ಕೆಲಸ ಮಾಡುವ ಅನುಭವವನ್ನು ಪಡೆದಿದ್ದಾರೆ. ಈ ಸಂಬಂಧ ಅವರು ತಮ್ಮ ಎಕ್ಸ್ ಖಾತೆಯಲ್ಲಿ ‘ಸ್ಟೇ ಟ್ಯೂನ್ಡ್’ ಎಂಬ ಸಂದೇಶದೊಂದಿಗೆ ಟೀಸರ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ ಬ್ಲಿಂಕಿಟ್ ಟಿ–ಶರ್ಟ್ ಹಾಗೂ ಜಾಕೆಟ್ ಧರಿಸಿರುವ ಚಡ್ಡಾ, ವಿತರಣಾ ರೈಡರ್ ಔನಿಂದ ಡೆಲಿವರಿ ಬ್ಯಾಗ್ ಸ್ವೀಕರಿಸುವುದು ಕಾಣುತ್ತದೆ. ಬಳಿಕ ಅವರು ವಿತರಣಾ ಪಾಲುದಾರರೊಂದಿಗೆ ಸ್ಕೂಟರ್ನಲ್ಲಿ ಹಿಂಬದಿ ಸವಾರಿ ಮಾಡುತ್ತಾರೆ. ವಸ್ತುಗಳನ್ನು ಸಂಗ್ರಹಿಸಲು ಅಂಗಡಿಯಲ್ಲಿ ನಿಲ್ಲುವುದು, ನಂತರ ವಿತರಣಾ ಸ್ಥಳದತ್ತ ತೆರಳುವ ದೃಶ್ಯಗಳೂ ವೀಡಿಯೊದಲ್ಲಿವೆ. ಗ್ರಾಹಕರ ಮನೆ ಬಾಗಿಲಿನ ಬಳಿ ರೈಡರ್ ಲಿಫ್ಟ್ನಿಂದ ಹೊರಬಂದು ಕರೆಗಂಟೆ ಒತ್ತುವಾಗ ಚಡ್ಡಾ ಅವರನ್ನು ನಿಕಟವಾಗಿ ಹಿಂಬಾಲಿಸುತ್ತಾರೆ.
ವೀಡಿಯೊ ‘ಸ್ಟೇ ಟ್ಯೂನ್ಡ್’ ಎಂಬ ಪದಗಳೊಂದಿಗೆ ಕ್ಲಿಫ್ಹ್ಯಾಂಗರ್ನಲ್ಲಿ ಅಂತ್ಯಗೊಳ್ಳುತ್ತದೆ. ಈ ಪೋಸ್ಟ್ಗೆ ಚಡ್ಡಾ, “ಬೋರ್ಡ್ ರೂಮ್ಗಳಿಂದ ದೂರ, ತಳಮಟ್ಟದಲ್ಲಿ. ನಾನು ಅವರೊಂದಿಗೆ ಒಂದು ದಿನ ಕಳೆದೆ. ಟ್ಯೂನ್ ಆಗಿರಿ,” ಎಂದು ಶೀರ್ಷಿಕೆ ನೀಡಿದ್ದಾರೆ.
ಗಿಗ್ ಹಾಗೂ ಡೆಲಿವರಿ ಪ್ಲಾಟ್ಫಾರ್ಮ್ ಕಾರ್ಮಿಕರು ಎದುರಿಸುತ್ತಿರುವ ಕಡಿಮೆ ವೇತನ, ದೀರ್ಘ ಕೆಲಸದ ಅವಧಿ ಮತ್ತು ಸಾಮಾಜಿಕ ಭದ್ರತೆಯ ಕೊರತೆ ಕುರಿತು ಚಡ್ಡಾ ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದ್ದರು. ಈ ಹಿನ್ನೆಲೆಯಲ್ಲೇ ಅವರ ಈ ಕ್ರಮ, ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಡಿಸೆಂಬರ್ 2025ರಲ್ಲಿ ಬ್ಲಿಂಕಿಟ್ ವಿತರಣಾ ಕಾರ್ಯನಿರ್ವಾಹಕರೊಬ್ಬರು ತಮ್ಮ ಆದಾಯದ ಕುರಿತು ಹಂಚಿಕೊಂಡ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಸಂಸತ್ತಿನ ಚಳಿಗಾಲದ ಅಧಿವೇಶನದ ನಂತರ, ಉತ್ತರಾಖಂಡದ ಥಪ್ಲಿಯಾಲ್ ಜಿ ಎಂದು ಗುರುತಿಸಲಾದ ಡೆಲಿವರಿ ಬಾಯ್ ಅವರನ್ನು ಚಡ್ಡಾ ತಮ್ಮ ನಿವಾಸಕ್ಕೆ ಊಟಕ್ಕೆ ಆಹ್ವಾನಿಸಿದ್ದರು.







