ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಜಾತಿಗಣತಿ ವಿಳಂಬಿಸಿ ತಪ್ಪು ಮಾಡಿದ್ದೇನೆ: ರಾಹುಲ್ ಗಾಂಧಿ ವಿಷಾದ

ರಾಹುಲ್ ಗಾಂಧಿ | PTI
ಹೊಸದಿಲ್ಲಿ,ಜು.25: ತನ್ನ ಪಕ್ಷದ ಸರಕಾರವಿರುವ ರಾಜ್ಯಗಳಲ್ಲಿ ಜಾತಿಗಣತಿ ನಡೆಸುವಲ್ಲಿ ವಿಳಂಬವೆಸಗಿರುವುದು ತನ್ನ ತಪ್ಪೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಒಪ್ಪಿಕೊಂಡಿದ್ದಾರೆ ಮತ್ತು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಈ ತಪ್ಪನ್ನು ಸರಿಪಡಿಸಲು ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ. ತನ್ನ 21 ವರ್ಷಗಳ ರಾಜಕೀಯ ಜೀವನದ ಅವಧಿಯಲ್ಲಿ ಇತರ ಹಿಂದುಳಿದ ವರ್ಗಗಳ (ಓಬಿಸಿ) ಹಿತಾಸಕ್ತಿಗಳನ್ನು ರಕ್ಷಿಸದೆ ಇರುವುದು ತಾನು ಎಸಗಿದ ಪ್ರಮಾದವಾಗಿದೆಯೆಂದು ಕೂಡಾ ಅವರು ಹೇಳಿದರು.
ಹೊಸದಲ್ಲಿಯ ತಾಲ್ಕೋಟಾ ಸ್ಟೇಡಿಯಂನಲ್ಲಿ ಓಬಿಸಿ ಸಮುದಾಯಗಳ ‘ಭಾಗಿದಾರಿ ನ್ಯಾಯ ಸಮ್ಮೇಳನ’ವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ‘‘2004 ರಿಂದೀಚೆಗೆ ಅಂದರೆ 21 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ನಾನು ಹಿಂತಿರುಗಿ ಆತ್ಮಾವಲೋಕನ ಮಾಡಿದಾಗ, ನಾನು ಏನು ಒಳಿತನ್ನು ಮಾಡಿದ್ದೇನೆ ಹಾಗೂ ಎಲ್ಲಿ ನಾನು ತಪ್ಪೆಸಗಿದೇದನೆ ಎಂಬುದಾಗಿ ಆತ್ಮವಿಮರ್ಶೆ ಮಾಡಿಕೊಂಡಿದ್ದೇನೆ. ಭೂಸ್ವಾಧೀನ ವಿಧೇಯಕ, ಎಂನರೇಗಾ, ಆಹಾರ ವಿಧೇಯಕ, ಬುಡಕಟ್ಟು ಜನರಿಗಾಗಿನ ಹೋರಾಟ, ಈ ವಿಷಯಗಳಲ್ಲಿ ನನ್ನಿಂದ ತಪ್ಪಾಗಿದೆ ಎಂದರು.
ದಲಿತರು, ಬುಡಕಟ್ಟು ಜನರು ಹಾಗೂ ಅಲ್ಪಸಂಖ್ಯಾತರ ವಿಷಯಕ್ಕೆ ಬರುವಾಗ ನನಗೆ ಉತ್ತಮ ಅಂಕಗಳೇ ಲಭಿಸಬೇಕಾಗಿದೆ. ಮಹಿಳೆಯರ ಸಮಸ್ಯೆಗಳ ವಿಷಯದಲ್ಲಿಯೂ ನನಗೆ ಉತ್ತಮ ಅಂಕಗಳು ಬರಬೇಕಾಗಿದೆ. ಆದರೆ ಆತ್ಮಾವಲೋಕನ ಮಾಡುವಾಗ ನಾನು ಒಂದು ತಪ್ಪನ್ನು ಮಾಡಿದ್ದೇನೆ. ಓಬಿಸಿ ವರ್ಗದ ರಕ್ಷಣೆಯನ್ನು ನಾನು ಮಾಡಬೇಕಾದ ರೀತಿಯಲ್ಲಿ ಮಾಡಲು ನನಗೆ ಸಾಧ್ಯವಾಗಲಿಲ್ಲ ಎಂದು ರಾಹುಲ್ ವಿಷಾದಿಸಿದು.
ಕಾಂಗ್ರೆಸ್ ಆಡಳಿತದ ತೆಲಂಗಾಣದಲ್ಲಿ ನಡೆಸಲಾದ ಜಾತಿ ಗಣತಿಯು ರಾಜಕೀಯ ಭೂಕಂಪವಾಗಿದೆ. ಅದು ದೇಶದ ರಾಜಕೀಯ ನೆಲೆಯನ್ನೇ ಅದು ಅಲುಗಾಡಿಸಿದೆ ಎಂದರು. ಕಾಂಗ್ರೆಸ್ ಆಳ್ವಿಕೆಯಿರುವ ಎಲ್ಲಾ ರಾಜ್ಯಗಳಲ್ಲಿಯೂ ಜಾತಿಗಣತಿಯನ್ನು ಅತ್ಯಂತ ನಿಖರವಾಗಿ ನಡೆಸಲಾಗುವುದೆಂದು ಅವರು ಹೇಳಿದರು.
ಆರೆಸ್ಸೆಸ್, ಬಿಜೆಪಿ ಉದ್ದೇಶಪೂರ್ವಕವಾಗಿ ದೇಶದ ಉತ್ಪಾದಕ ಶಕ್ತಿಯಾದ ಓಬಿಸಿಗಳ ಇತಿಹಾಸವನ್ನು ಅಳಿಸಿಹಾಕಿದೆ ಎಂದು ರಾಹುಲ್ ಆಪಾದಿಸಿದರು.







