ದಯವಿಟ್ಟು ಕಾಯಿರಿ, ನಾನೇ ನಿಮಗೆ ಕರೆ ಮಾಡುವೆ: ಡಿ.ಕೆ.ಶಿವಕುಮಾರ್ಗೆ ರಾಹುಲ್ ಗಾಂಧಿ ಸಂದೇಶ

ರಾಹುಲ್ ಗಾಂಧಿ , ಡಿ.ಕೆ.ಶಿವಕುಮಾರ್ | Photo Credit : PTI
ಹೊಸದಿಲ್ಲಿ,ನ.26: ಕರ್ನಾಟಕದಲ್ಲಿ ‘ನಾಯಕತ್ವ ಬದಲಾವಣೆ’ ಹಾಗೂ ಸಂಪುಟ ಪುನಾರಚನೆ ಕುರಿತ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದು,‘ ದಯವಿಟ್ಟು ಕಾಯಿರಿ, ನಾನೇ ನಿಮಗೆ ಕರೆ ಮಾಡುವೆ’’ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಮಧ್ಯೆ ಮುಖ್ಯಮಂತ್ರಿ ಹುದ್ದೆಯ ವಿಚಾರವಾಗಿ ತಲೆದೋರಿರುವ ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯಲಿದೆ. ನಾಯಕತ್ವ ಬದಲಾವಣೆ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಡಿಸೆಂಬರ್ 1ರಂದು ಸಂಸತ್ ನ ಚಳಿಗಾಲದ ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ರಾಜ್ಯದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರವೊಂದನ್ನು ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಯಕತ್ವ ಬದಲಾವಣೆ ಕುರಿತ ಅಂತಿಮ ನಿರ್ಧಾರವನ್ನು ಸಮಾಲೋಚನೆಗಳನ್ನು ನಡೆಸಿದ ಬಳಿಕ ಸೋನಿಯಾಗಾಂಧಿ,ರಾಹುಲ್ ಗಾಂಧಿ ಹಾಗೂ ತಾನು ಕೈಗೊಳ್ಳಲಿರುವುದಾಗಿ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು ‘‘ ಕರ್ನಾಟಕ ಸರಕಾರ ಏನು ಮಾಡುತ್ತಿದೆಯೆಂದು ಅಲ್ಲಿನ ಜನತೆ ಮಾತ್ರವೇ ಹೇಳಬಲ್ಲರು. ಆದರೆ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ವಿಷಯಗಳನ್ನು ರಾಹುಲ್ ಗಾಂಧಿ, ಸೋನಿಯಾಗಾಂಧಿ ಹಾಗೂ ನಾನು ಜೊತೆಯಾಗಿ ಕುಳಿತು ಚರ್ಚಿಸಲಿದ್ದೇವೆ. ಇದಕ್ಕೆ ಅಗತ್ಯವಿರುವ ಯಾವುದೇ ರೀತಿಯ ಮಧ್ಯಸ್ಥಿಕೆಯನ್ನು ಕೂಡಾ ನಾವು ಒದಗಿಸಲಿದ್ದೇವೆ’’ ಎಂದವರು ಹೇಳಿದ್ದಾರೆ.
ನವೆಂಬರ್ 20ರಂದು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಎರಡೂವರೆ ವರ್ಷಗಳ ಆಳ್ವಿಕೆಯನ್ನು ಪೂರ್ಣಗೊಳಿಸಿದ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಏರ್ಪಟ್ಟಿದೆಯೆನ್ನಲಾದ ಅಧಿಕಾರ ಹಂಚಿಕೆಯ ಉಪ್ಪಂದವನ್ನು ಉಲ್ಲೇಖಿಸಿ, ಮುಖ್ಯಮಂತ್ರಿ ಹುದ್ದೆಗಾಗಿ ಜಟಾಪಟಿ ತೀವ್ರಗೊಂಡಿದೆ.







