ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವಂತೆ ಪ್ರಧಾನಿಗೆ ಒತ್ತಡ ಹೇರಲು ಎಪ್ಸ್ಟೀನ್ ಫೈಲ್ ಬಳಸಿದ ಟ್ರಂಪ್: ರಾಹುಲ್ ಗಾಂಧಿ ಆರೋಪ

ರಾಹುಲ್ ಗಾಂಧಿ | Photo Credit : PTI
ಕಣ್ಣೂರು, ಫೆ. 26: ಭಾರತೀಯ ರೈತರನ್ನು ಬಲಿಕೊಡುವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಪ್ ಸ್ಟೀನ್ ಫೈಲ್ ಗಳನ್ನು ಬಳಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದರು.
ಅವರು ಕಣ್ಣೂರು ಜಿಲ್ಲೆಯ ಪೆರವೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿ ಮಾತನಾಡಿದರು.
ರೈತರು ಭಾರತದ ಅಡಿಪಾಯ ಎಂಬ ಸರಳ ಸತ್ಯವನ್ನು ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಮಾಹಿತಿ ತಂತ್ರಜ್ಞಾನ ಹಾಗೂ ಇತರ ವಲಯಗಳ ಬಗ್ಗೆ ದೀರ್ಘ ಉಪನ್ಯಾಸಗಳನ್ನು ನೀಡಲಾಗುತ್ತಿದೆ. ಆದರೆ ಅಡಿಪಾಯವನ್ನು ಸದೃಢಗೊಳಿಸದೆ ಏನನ್ನೂ ನಿರ್ಮಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
‘‘ನೀವು ಅಡಿಪಾಯಕ್ಕೆ ಗೌರವ ನೀಡದೇ ಇದ್ದರೆ, ಏನನ್ನೂ ನಿರ್ಮಿಸಲು ಸಾಧ್ಯವಿಲ್ಲ. ಅಡಿಪಾಯ ನಿರ್ಮಿಸುವ ವ್ಯಕ್ತಿಗೆ ಗೌರವ ಅಥವಾ ರಕ್ಷಣೆ ಇಲ್ಲ. ನಾವು ಪ್ರತಿ ದಿನ ಆಹಾರ ಸೇವಿಸುತ್ತೇವೆ. ಆದರೆ ಅದನ್ನು ನಮ್ಮ ಮೇಜಿನ ಮೇಲೆ ಯಾರು ಇರಿಸಿದರು ಎಂಬುದನ್ನು ನಾವು ನೆನಪಿಸಿಕೊಳ್ಳುವುದಿಲ್ಲ’’ ಎಂದು ಅವರು ತಿಳಿಸಿದರು.
ಪ್ರಧಾನಿ ಅವರು ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದ ದೇಶದ ಅಡಿಪಾಯವನ್ನು ನಾಶ ಮಾಡಿದಂತೆ ಎಂದು ಅವರು ಆರೋಪಿಸಿದರು.
‘‘ಭಾರತದ ರೈತರು ಸಣ್ಣ ರೈತರು. ಅವರು ಸಣ್ಣ ಮಟ್ಟದಲ್ಲಿ ಯಂತ್ರೋಪಕರಣಗಳನ್ನು ಬಳಸುತ್ತಾರೆ. ಅಮೆರಿಕದ ರೈತರು ದೊಡ್ಡ ರೈತರು. ಅವರು ದೊಡ್ಡ ಮಟ್ಟದಲ್ಲಿ ಯಂತ್ರೋಪಕರಣಗಳನ್ನು ಬಳಸುತ್ತಾರೆ. ಅಮೆರಿಕದ ರೈತರಿಗೆ ಭಾರತೀಯ ಕೃಷಿ ಮಾರುಕಟ್ಟೆಯಲ್ಲಿ ಅವಕಾಶ ನೀಡುವುದು ಕ್ರಿಮಿನಲ್ ಕೃತ್ಯ’’ ಎಂದು ಅವರು ಹೇಳಿದರು.
‘‘ನಾವು ಎಚ್ಚರಿಕೆಯಿಂದ ನಿರ್ಮಿಸಿದ ಅಡಿಪಾಯವನ್ನು ಈ ಒಪ್ಪಂದ ನಾಶಮಾಡಲಿದೆ. ನಮಗೆ ಕೃಷಿಯಲ್ಲಿ ಅಡಿಪಾಯ ಬೇಕು ಎಂದು ನಾವು ಭಾವಿಸಿದ್ದರಿಂದ ಹಸಿರು ಹಾಗೂ ಶ್ವೇತ ಕ್ರಾಂತಿಗಳು ಸಂಭವಿಸಿದವು’’ ಎಂದು ರಾಹುಲ್ ಗಾಂಧಿ ಹೇಳಿದರು.







