Kerala | ಐದು ಗ್ಯಾರಂಟಿಗಳನ್ನು ಘೋಷಿಸಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ | Photo Credit : PTI
ತಿರುವನಂತಪುರ,ಮಾ.8: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ನೆರವಾಗಿದ್ದ ‘ಗ್ಯಾರಂಟಿ’ ಮಾದರಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಯುಡಿಎಫ್ ಕೇರಳದಲ್ಲಿ ಮುಂದಿನ ಸರಕಾರವನ್ನು ರಚಿಸಿದರೆ ರಾಜ್ಯದ ಜನತೆಗಾಗಿ ಐದು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.
ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಲು, ಕುಟುಂಬಗಳಿಗೆ ಹಣಕಾಸು ಭದ್ರತೆಯನ್ನೊದಗಿಸಲು, ಉದ್ಯಮಶೀಲತೆಯಲ್ಲಿ ಅವಕಾಶಗಳ ಸೃಷ್ಟಿ ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಈ ಗ್ಯಾರಂಟಿಗಳನ್ನು ರೂಪಿಸಲಾಗಿದೆ. ಶನಿವಾರ ಇಲ್ಲಿ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ನೇತೃತ್ವದ ‘ಪುದುಯುಗ ಯಾತ್ರೆ’ಯ ಸಮಾರೋಪದಲ್ಲಿ ಈ ಗ್ಯಾರಂಟಿಗಳನ್ನು ಪ್ರಕಟಿಸಲಾಗಿದೆ.
ಈ ಗ್ಯಾರಂಟಿಗಳಲ್ಲಿ ಎಲ್ಲ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ, ಕಾಲೇಜು ವಿದ್ಯಾರ್ಥಿನಿಯರಿಗೆ ಮಾಸಿಕ 1,000 ರೂ.ಭತ್ಯೆ, ಕಲ್ಯಾಣ ಪಿಂಚಣಿ 3,000 ರೂ.ಗೆ ಏರಿಕೆ ಮತ್ತು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಹೆಸರಿನಲ್ಲಿ ಪ್ರತಿ ಕುಟುಂಬಕ್ಕೆ 25 ಲ.ರೂ.ಗಳ ಆರೋಗ್ಯ ವಿಮೆ ಯೋಜನೆ ಸೇರಿವೆ. ಯುವಜನರಿಗೆ ವ್ಯಾಪಾರೋದ್ಯಮಗಳನ್ನು ಆರಂಭಿಸಲು ಐದು ಲ.ರೂ.ಗಳ ಬಡ್ಡಿರಹಿತ ಸಾಲ ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಭರವಸೆಯನ್ನೂ ರಾಹುಲ್ ನೀಡಿದರು.
ಅಧಿಕಾರದಲ್ಲಿರುವ ಎಲ್ಡಿಎಫ್ ಸರಕಾರವು ಕೇರಳದಲ್ಲಿ ಬೃಹತ್ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸಿದೆ ಎಂದು ಆರೋಪಿಸಿದ ಅವರು,‘ನಾವು ಕೇರಳದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಮತ್ತು ಜನರಿಗೆ ರಕ್ಷಣೆಯನ್ನು ಒದಗಿಸುತ್ತೇವೆ’ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್, ಅವರು ಅಮೆರಿಕದೊಂದಿಗೆ ಭಾರತದ ಹಿತಾಸಕ್ತಿಗಳಿಗೆ ಹಾನಿಕಾರಕವಾದ ಹಲವಾರು ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ದೇಶಕ್ಕೆ ದ್ರೋಹವೆಸಗಿದ್ದಾರೆ ಎಂದರು. ಮೋದಿ ತನ್ನನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಯಂತ್ರಿಸುತ್ತಿರುವ ರೀತಿಯಲ್ಲಿಯೇ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಮೆರಿಕದಲ್ಲಿ ಎಪ್ಸ್ಟೀನ್ ಫೈಲ್ಗಳು ಬಹಿರಂಗಗೊಳಿಸುತ್ತಿರುವ ಮಾಹಿತಿಗಳಿಂದ ಮೋದಿ ಭಯಗೊಂಡಿದ್ದರೆ ಪಿಣರಾಯಿ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆಯ ಭೀತಿಯಲ್ಲಿದ್ದಾರೆ ಎಂದು ಆರೋಪಿಸಿದ ಅವರು, ವಿಜಯನ್ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ತನಿಖೆಯೇಕಿಲ್ಲ? ಕೇರಳದಲ್ಲಿ ಇರುವುದು ಸಿಪಿಎಂ ಮತ್ತು ಬಿಜೆಪಿ ಅಲ್ಲ, ಅದು ‘ಸಿಜೆಪಿ’. ಅವರು ಯುಡಿಎಫ್ನ್ನು ಸೋಲಿಸಲು ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದರು.
ಕಮ್ಯುನಿಸ್ಟ್ ಪಕ್ಷವನ್ನು ಕಾರ್ಪೊರೇಟ್ ಪಕ್ಷವೆಂದು ಗೇಲಿ ಮಾಡಿದ ರಾಹುಲ್,ರಾಜ್ಯದಲ್ಲಿಯ ಎಲ್ಡಿಎಫ್ ಸರಕಾರವು ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಎನ್ನುವುದನ್ನು ಸಿಪಿಎಂ ಕಾರ್ಯಕರ್ತರೂ ಒಪ್ಪುತ್ತಾರೆ ಎಂದರು.
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ ಕುರಿತಂತೆ ಅವರು,ಕೇರಳದ ಪವಿತ್ರ ಸ್ಥಳಗಳಲ್ಲೊಂದರಲ್ಲಿ ಇಂತಹ ಘಟನೆಯು ನಡೆದಿರುವುದು ಲಜ್ಜೆಗೇಡು ಎಂದು ಕುಟುಕಿದರು.
ಈ ನಡುವೆ ರಾಹುಲ್ ಭಾಷಣವನ್ನು ಮಲಯಾಳಂ ಭಾಷೆಗೆ ಅನುವಾದಿಸಿದ್ದ ಐಯುಎಂಎಲ್ ಸಂಸದ ಅಬ್ದುಸಮದ್ ಸಮದಾನಿ ಕೆಲವು ಭಾಗಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದು ಹಲವರ ಹುಬ್ಬುಗಳನ್ನು ಮೇಲಕ್ಕೇರಿಸಿತ್ತು. ಒಂದು ಹಂತದಲ್ಲಿ ಅನುವಾದದ ವೇಳೆ ಕೈಬಿಟ್ಟಿದ್ದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಹೆಸರನ್ನು ರಾಹುಲ್ ಸಮದಾನಿಯವರಿಗೆ ನೆನಪಿಸಿದ್ದರು.







