ಕರ್ನಾಟಕದ ಆಳಂದದಲ್ಲಿ 6 ಸಾವಿರ ಮತದಾರರ ಹೆಸರುಗಳನ್ನು ಅಳಿಸಲು ಯತ್ನ: ರಾಹುಲ್ ಗಾಂಧಿ ಆರೋಪ

ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ಮತಗಳ್ಳತನಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಎಐಸಿಸಿ ಇಂದಿರಾ ಭವನ ಪ್ರಧಾನ ಕಚೇರಿಯಲ್ಲಿ ಎರಡನೇ ಸ್ಫೋಟಕ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವವನ್ನು ನಾಶಗೈಯುತ್ತಿರುವ ಜನರನ್ನು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಅವರು ಆರೋಪಿಸಿದ್ದಾರೆ.
ದೇಶಾದ್ಯಂತ ಲಕ್ಷಾಂತರ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದ ವ್ಯವಸ್ಥಿತ ಸಂಚೊಂದು ಈಗ ಚಾಲ್ತಿಯಲ್ಲಿದೆ ಎಂದು ಅವರು ಹೇಳಿದರು.
‘‘100 ಶೇಕಡ ಪುರಾವೆ ಇರದ ಯಾವುದೇ ಸಂಗತಿಯನ್ನು ನಾನು ಈ ವೇದಿಕೆಯಲ್ಲಿ ಹೇಳುವುದಿಲ್ಲ’’ ಎಂದು ಅವರು ಹೇಳಿದರು. ಹೈಡ್ರೋಜನ್ ಬಾಂಬ್ ಬರುತ್ತಿದೆ ಎಂದು ಹೇಳುತ್ತಾ ಪತ್ರಿಕಾಗೋಷ್ಠಿಯನ್ನು ಮುಕ್ತಾಯಗೊಳಿಸಿದರು. ‘‘ಹೈಡ್ರೋಜನ್ ಬಾಂಬ್ಗೆ ಸಿದ್ಧತೆಗಳು ನಡೆಯುತ್ತಿವೆ’’ ಎಂದರು.
2023ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಕರ್ನಾಟಕದ ಅಳಂದ ವಿಧಾನಸಭಾ ಕ್ಷೇತ್ರದಲ್ಲಿ 6,018 ಮತದಾರರ ಹೆಸರುಗಳನ್ನು ಅಳಿಸಿ ಹಾಕಲು ಬೃಹತ್ ಪ್ರಮಾಣದ ಪ್ರಯತ್ನವೊಂದನ್ನು ಮಾಡಲಾಗಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದರು. ಈ ಪ್ರಕರಣದಲ್ಲಿ, ಪುರಾವೆಯನ್ನು ಪೊಲೀಸರಿಗೆ ಸಲ್ಲಿಸಲು ಭಾರತೀಯ ಚುನಾವಣಾ ಆಯೋಗ ನಿರಾಕರಿಸಿದೆ ಎಂದು ಅವರು ಹೇಳಿದರು.
ಅಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನ್ನಲ್ಲಿ ‘‘100% ಪುರಾವೆ’’ ಇದೆ ಎಂದು ಹೇಳಿದ ರಾಹುಲ್ ಗಾಂಧಿ, ಜಾಗೃತ ಮತಗಟ್ಟೆ ಮಟ್ಟದ ಅಧಿಕಾರಿಯೊಬ್ಬರಿಂದಾಗಿ ಈ ಹೆಸರುಗಳನ್ನು ಅಳಿಸಿಹಾಕುವ ಪ್ರಯತ್ನಕ್ಕೆ ತಡೆಬಿತ್ತು ಎಂದರು. ಆ ಮತಗಟ್ಟೆ ಮಟ್ಟದ ಅಧಿಕಾರಿಯು, ಮತದಾರರ ಪಟ್ಟಿಯಲ್ಲಿ ತನ್ನ ಮಾವನ ಹೆಸರು ನಾಪತ್ತೆಯಾಗಿರುವುದನ್ನು ಗಮನಿಸಿದರು ಮತ್ತು ಹೆಸರು ತೆಗೆಯುವಂತೆ ಕೋರುವ ಅರ್ಜಿಯನ್ನು ಮಾವನ ಪರವಾಗಿ ನೆರೆಮನೆಯ ಮಹಿಳೆಯೊಬ್ಬರು ಸಲ್ಲಿಸಿರುವುದನ್ನು ಪತ್ತೆಹಚ್ಚಿದರು ಎಂದು ರಾಹುಲ್ ಹೇಳಿದರು.
‘‘ನೀವು ಹೀಗೆ ಯಾಕೆ ಮಾಡಿದಿರಿ ಎಂಬುದಾಗಿ ತನ್ನ ನೆರೆಮನೆಯ ಮಹಿಳೆಯನ್ನು ಮತಗಟ್ಟೆ ಮಟ್ಟದ ಅಧಿಕಾರಿಯು ಪ್ರಶ್ನಿಸಿದಾಗ, ಅದರ ಬಗ್ಗೆ ಅವರಿಗೆ ಗೊತ್ತೇ ಇರಲಿಲ್ಲ’’ ಎಂದು ಕಾಂಗ್ರೆಸ್ ಸಂಸದ ನುಡಿದರು. ಬೇರೆಯವರ ಸೋಗು ಹಾಕುವುದು ಮತ್ತು ತಂತ್ರಜ್ಞಾನದ ದುರ್ಬಳಕೆ- ಈ ವಂಚನೆಯ ಹಿಂದಿನ ಎರಡು ಮುಖ್ಯ ಅಂಶಗಳಗಿದ್ದವು ಎಂದರು.
ಈ ಪಿತೂರಿಯಂತೆ, ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಕೋರಿ ನೈಜ ಮತದಾರರು ಭಾರೀ ಸಂಖ್ಯೆಯಲ್ಲಿ ನಮೂನೆ 7ರಲಿ ಅರ್ಜಿಗಳನ್ನು ಹಾಕಿದ್ದರು ಎಂದು ರಾಹುಲ್ ಆರೋಪಿಸಿದರು. ‘‘ಯಾರ ಹೆಸರುಗಳಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತೋ ಅವರು ಸಲ್ಲಿಸಿರಲೇ ಇಲ್ಲ. ಈ ಅರ್ಜಿಗಳನ್ನು ಸಾಫ್ಟ್ವೇರೊಂದನ್ನು ಬಳಸಿ ಸ್ವಯಂಚಾಲಿತವಾಗಿ ಸಲ್ಲಿಸಲಾಗಿತ್ತು. ಮತದಾರರ ಹೆಸರುಗಳನ್ನು ಅಳಿಸಿ ಹಾಕುವುದಕ್ಕಾಗಿ ಒಟಿಪಿಗಳನ್ನು ಸೃಷ್ಟಿಸಲು ಬೇರೆ ರಾಜ್ಯಗಳ ಮೊಬೈಲ್ ಪೋನ್ ಸಂಖ್ಯೆಗಳನ್ನು ಬಳಸಲಾಗಿತ್ತು. ಈ ವಂಚನಾ ಕಾರ್ಯಾಚರಣೆಯು ಕಾಂಗ್ರೆಸ್ ಬೆಂಬಲಿಗರನ್ನು ಗುರಿಮಾಡಿತ್ತು’’ ಎಂದು ರಾಹುಲ್ ಆರೋಪಿಸಿದರು.
ಜೀವಂತ ಸಾಕ್ಷಿಗಳು ಹಾಜರು!
ಅವ್ಯವಹಾರದ ವಿವರಗಳನ್ನು ನೀಡಿದ ರಾಹುಲ್ ಗಾಂಧಿ, ಮತದಾರರ ಪಟ್ಟಿಯಿಂದ 12 ಮತದಾರರ ಹೆಸರುಗಳನ್ನು ಅಳಿಸಲು ಹಾಕಿದ ಅರ್ಜಿಯೊಂದರಲ್ಲಿ, ಅವರ ನೆರೆಮನೆಯ 63 ವರ್ಷದ ಮಹಿಳೆ ಗೋದಾಬಾಯಿ ಹೆಸರನ್ನು ಬಳಸಲಾಗಿತ್ತು ಎಂದರು. ಇನ್ನೊಂದು ಪ್ರಕರಣದಲ್ಲಿ, 12 ಅರ್ಜಿಗಳನ್ನು ಸೂರ್ಯಕಾಂತ್ ಎಂಬವರ ಹೆಸರಿನಲ್ಲಿ ಸಲ್ಲಿಸಲಾಗಿತ್ತು. ಈ 12 ಅರ್ಜಿಗಳನ್ನು 14 ನಿಮಿಷಗಳಲ್ಲಿ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ, ಸೂರ್ಯಕಾಂತ್ ಮತ್ತು ಇತರ ಸಂತ್ರಸ್ತ ಮತದಾರರನ್ನು ರಾಹುಲ್ ಗಾಂಧಿ ವೇದಿಕೆಗೆ ಕರೆಸಿಕೊಂಡರು.
‘‘ನನ್ನ ಗಮನಕ್ಕೆ ಬಾರದೆ, 12 ಮತದಾರರ ಹೆಸರುಗಳನ್ನು ಅಳಿಸಿಹಾಕಲು ನನ್ನ ಹೆಸರಿನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ನಾನು ಇಂಥ ಯಾವುದೇ ಅರ್ಜಿಯನ್ನು ತುಂಬಿಸಿಲ್ಲ ಅಥವಾ ಇಂಥ ಯಾವುದೇ ಸಂದೇಶವನ್ನು ಕಳುಹಿಸಿಲ್ಲ’’ ಎಂದು ಸೂರ್ಯಕಾಂತ್ ಈ ಸಂದರ್ಭದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ, ನಾಗರಾಜ್ ಎಂಬ ವ್ಯಕ್ತಿಯನ್ನೂ ರಾಹುಲ್ ಗಾಂಧಿ ವೇದಿಕೆಗೆ ಕರೆದರು. ಅವರ ಹೆಸರಿನಲ್ಲಿ ಮುಂಜಾನೆ 4 ಗಂಟೆಗೆ ಮತದಾರರ ಹೆಸರುಗಳನ್ನು ಅಳಿಸಿಹಾಕಬೇಕೆಂದು ಕೋರಿ ಅರ್ಜಿಗಳನ್ನು ಹಾಕಲಾಗಿತ್ತು. ‘‘ಸಮಯವನ್ನು ಗಮನಿಸಿ. ಇವರು ಅರ್ಜಿ ಸಲ್ಲಿಸುವುದಕ್ಕಾಗಿ ಮುಂಜಾನೆ 4 ಗಂಟೆಗೆ ಒಮ್ಮೆಲೆ ಏಳುತ್ತಾರೆ’’ ಎಂದು ರಾಹುಲ್ ನುಡಿದರು. ಈ ವಂಚನೆಯಲ್ಲಿ ಸಾಫ್ಟ್ವೇರ್ ಬಳಸಲಾಗಿದೆ ಎಂದರು.
ಮುಖ್ಯವಾಗಿ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದ್ದ ಮತಗಟ್ಟೆಗಳಲ್ಲಿ, ನಿರ್ದಿಷ್ಟ ಮತದಾರರ ಹೆಸರುಗಳನ್ನು ಅಳಿಸಿ ಹಾಕಲು ಸಾಫ್ಟ್ವೇರೊಂದನ್ನು ಬಳಸಲಾಗಿತ್ತು ಎಂದು ರಾಹುಲ್ ಆರೋಪಿಸಿದರು.
ಸಿಐಡಿ ತನಿಖೆಗೆ ಚುನಾವಣಾ ಆಯೋಗದ ಅಸಹಕಾರ:
ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಂಚನೆ ಬಗ್ಗೆ 2023ರಲ್ಲಿ ಕರ್ನಾಟಕದಲ್ಲಿ ಮೊಕದ್ದಮೆ ದಾಖಲಿಸಲಾಯಿತು ಮತ್ತು ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಯಿತು ಎಂದು ರಾಹುಲ್ ಗಾಂಧಿ ಹೇಳಿದರು. ಮುಂದಿನ 18 ತಿಂಗಳುಗಳ ಅವಧಿಯಲ್ಲಿ, ಪ್ರತಿಕ್ರಿಯೆ ನೀಡುವಂತೆ ಕೋರಿ ಸಿಐಡಿಯು ಭಾರತೀಯ ಚುನಾವಣಾ ಆಯೋಗಕ್ಕೆ 18 ಪತ್ರಗಳನ್ನು ಬರೆಯಿತು. ಆದರೆ, ಆಯೋಗವು ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.
ಯಾವ ಐಪಿಗಳಿಗೆ ಮತ್ತು ಯಾವ ಐಪಿಗಳಿಂದ ಅರ್ಜಿಗಳನ್ನು ಸಲ್ಲಿಸಲಾಗಿದೆ, ಅರ್ಜಿಗಳನ್ನು ಕಳುಹಿಸಲಾಗಿರುವ ಸಲಕರಣೆಗಳ ಪೋರ್ಟ್ಗಳು ಮತ್ತು ಒಟಿಪಿ ಟ್ರೇಲ್ ಮುಂತಾದ ವಿವರಗಳನ್ನು ಸಿಐಡಿಯು ಚುನಾವಣಾ ಆಯೋಗದಿಂದ ಕೋರಿತ್ತು.
ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತರೂ ಭಾರತೀಯ ಚುನಾವಣಾ ಆಯೋಗಕ್ಕೆ ಪದೇ ಪದೇ ಪತ್ರಗಳನ್ನು ಬರೆದರು. ಆದರೆ, 2025ರ ಆಗಸ್ಟ್ನಲ್ಲಿ ಕೇವಲ ಆಂಶಿಕ ಮಾಹಿತಿಗಳನ್ನು ನೀಡಲಾಯಿತು ಎಂದು ರಾಹುಲ್ ಹೇಳಿದರು. ತನಿಖೆ ಮುಂದುವರಿಯಲು ಸಾಕಾಗದ ಪುರಾವೆಯನ್ನಷ್ಟೇ ಚುನಾವಣಾ ಆಯೋಗವು ನೀಡಿತು ಎಂದು ಕಾಂಗ್ರೆಸ್ ನಾಯಕ ಹೇಳಿದರು.
‘‘ಜ್ಞಾನೇಶ್ ಕುಮಾರ್ ಅವರೇ, ನೀವು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಕೆಲಸ ಮಾಡುತ್ತಿದ್ದೀರಾ? ನೀವು ಪ್ರತಿಜ್ಞೆ ಸ್ವೀಕರಿಸಿದ್ದೀರಿ. ಪುರಾವೆಗಳನ್ನು ಒಂದು ವಾರದೊಳಗೆ ಸಿಐಡಿಗೆ ಕೊಡಿ. ನೀವು ಕೊಡದಿದ್ದರೆ, ಭಾರತೀಯ ಪ್ರಜಾಪ್ರಭುತ್ವವನ್ನು ನಾಶಪಡಿಸುವಲ್ಲಿ ನೀವು ಕೂಡ ಶಾಮೀಲಾಗಿದ್ದೀರಿ ಎಂಬುದಾಗಿ ಭಾರತದ ಯುವಜನ ಭಾವಿಸುತ್ತಾರೆ’’ ಎಂದು ರಾಹುಲ್ ಹೇಳಿದರು.
‘‘18 ತಿಂಗಳುಗಳಲ್ಲಿ 18 ಬಾರಿ, ಕರ್ನಾಟಕ ಸಿಐಡಿ ಈ ವಿಷಯದಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರಗಳನ್ನು ಬರೆದಿದೆ. ಆದರೂ ಅವರು ಮಾಹಿತಿಗಳನ್ನು ಕೊಡುತ್ತಿಲ್ಲ. ಅವರು ಯಾಕೆ ಮಾಹಿತಿಗಳನ್ನು ಕೊಡುತ್ತಿಲ್ಲ? ಯಾಕೆಂದರೆ, ಇದರಿಂದ ಈ ವಂಚನಾ ಕಾರ್ಯಾಚರಣೆಯನ್ನು ಎಲ್ಲಿ ನಡೆಸಲಾಗುತ್ತಿದೆ ಎನ್ನುವುದು ನಮಗೆ ಗೊತ್ತಾಗುತ್ತದೆ. ಈ ಮಾಹಿತಿಯು ಯಾರ ಬುಡಕ್ಕೆ ಹೋಗುತ್ತದೆ ಎನ್ನುವುದು ನಮಗೆ ಸ್ಪಷ್ಟವಾಗಿ ಗೊತ್ತಿದೆ’’ ಎಂದರು.
ನಕಲಿ ಲಾಗಿನ್ಗಳು, ಸಂಶಯಾಸ್ಪದ ಫೋನ್ ಸಂಖ್ಯೆಗಳು...:
ಅಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಯಲು ನಕಲಿ ಲಾಗಿನ್ಗಳು ಮತ್ತು ಕರ್ನಾಟಕದ ಹೊರಗಿನ ಮೊಬೈಲ್ ಫೋನ್ ಸಂಖ್ಯೆಗಳನ್ನು ಬಳಸಲಾಗಿತ್ತು ಎನ್ನುವುದನ್ನು ತೋರಿಸುವ ಚಿತ್ರಗಳನ್ನು ರಾಹುಲ್ ಗಾಂಧಿ ಪ್ರದರ್ಶಿಸಿದರು.
ಮತದಾರರ ಹೆಸರುಗಳ ಅಳಿಸುವಿಕೆಯ ಹಿಂದೆ ಕೇಂದ್ರೀಕೃತ ಸಾಫ್ಟ್ವೇರ್ ಆಧಾರಿತ ಕಾರ್ಯಾಚರಣೆ ಇದೆ ಎಂದು ಅವರು ಆರೋಪಿಸಿದರು ಹಾಗೂ ಈ ಕಾರ್ಯಾಚರಣೆಯು ಯಾವುದಾದರೂ ಕಾಲ್-ಸೆಂಟರ್ನಿಂದ ನಡೆಯುತ್ತಿರಬಹುದು ಎಂದರು.
ಒಂದಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ಅರ್ಜಿಗಳನ್ನು ಸಲ್ಲಿಸಲು ಒಂದೇ ಮೊಬೈಲ್ ಸಂಖ್ಯೆಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದರು. ಮತದಾರರ ಹೆಸರುಗಳನ್ನು ಅಳಿಸಲು ಮತ್ತು ಸೇರಿಸಲು ಎರಡೂ ಉದ್ದೇಶಗಳಿಗೆ ಈ ಸಾಫ್ಟ್ವೇರ್ನ್ನು ರೂಪಿಸಲಾಗಿದೆ ಎಂದರು.
ಮಹಾರಾಷ್ಟ್ರದ ರಜುರದಲ್ಲಿ 6,850 ನಕಲಿ ಹೆಸರುಗಳ ಸೇರ್ಪಡೆ:
ಕರ್ನಾಟಕದ ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ಸಾಫ್ಟ್ವೇರ್ ಬಳಸಿ ಮತದಾರರ ಹೆಸರುಗಳನ್ನು ಅಳಿಸಿಹಾಕಿದರೆ, ಮಹಾರಾಷ್ಟ್ರದ ರಜುರ ವಿಧಾನಸಭಾ ಕ್ಷೇತ್ರದಲ್ಲಿ ಇಂಥದೇ ಸಾಫ್ಟ್ವೇರ್ ಬಳಸಿ 6,850 ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಆನ್ಲೈನ್ ಮೂಲಕ ಸೇರಿಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಜುರ ವಿಧಾನಸಭಾ ಕ್ಷೇತ್ರವು ವಿದರ್ಭ ವಲಯದ ಚಂದ್ರಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು. ಈ ಕ್ಷೇತ್ರವು 1996ರಿಂದ ಬಿಜೆಪಿ ಅಥವಾ ಕಾಂಗ್ರೆಸ್ ವಶದಲ್ಲಿದೆ. ಕಳೆದ ವರ್ಷ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ರಜುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿತ್ತು.
ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ರಾಜ್ಯಾದ್ಯಂತ ಹಿನ್ನಡೆ ಅನುಭವಿಸಿತ್ತು. ಅದರಂತೆ ಚಂದ್ರಾಪುರ ಲೋಕಸಭಾ ಕ್ಷೇತ್ರದಲ್ಲಿ 2.6 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋತಿತ್ತು. ರಜುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ದಾನೋರ್ಕರ್ ಬಿಜೆಪಿಯ ಸುಧೀರ್ ಮುಂಗಂತಿವರ್ ವಿರುದ್ಧ 58,349 ಮತಗಳ ಮುನ್ನಡೆ ಪಡೆದಿದ್ದರು. ಲೋಕಸಭಾ ಚುನಾವಣೆಯಲ್ಲಿ, ಎಲ್ಲಾ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು.
ಆದರೆ, ನಾಲ್ಕು ತಿಂಗಳುಗಳ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪರಿಸ್ಥಿತಿ ಬದಲಾಗಿತ್ತು. ರಜುರ ಕ್ಷೇತ್ರದಲ್ಲಿ ಬಿಜೆಪಿಯ ವಿಠೋಬ ಭೋಂಗ್ಲೆ ಕಾಂಗ್ರೆಸ್ನ ಸುಭಾಶ್ ಧೋತೆಯನ್ನು 3,054 ಮತಗಳ ಅಂತರದಿಂದ ಸೋಲಿಸಿದರು.
‘‘ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯು ನ್ಯಾಯೋಚಿತವಾಗಿ ನಡೆದಿಲ್ಲ ಎಂದು ಭಾವಿಸಲು ನಮ್ಮಲ್ಲಿ ಕಾರಣಗಳಿವೆ. ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಬಿಜೆಪಿ-ಆರೆಸ್ಸೆಸ್ ಮತ ವಂಚನೆಯಲ್ಲಿ ತೊಡಗಿತ್ತು’’ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ ವಸಂತ್ರಾವ್ ಸಪ್ಕಲ್ ಆರೋಪಿಸಿದ್ದಾರೆ.
‘‘ಅಳಂದ್ನಲ್ಲಿ ಮತದಾರರ ಹೆಸರುಗಳನ್ನು ಅಳಿಸಿ ಹಾಕಿದರೆ, ರಜುರದಲ್ಲಿ ನಕಲಿ ಹೆಸರುಗಳನ್ನು ಸೇರಿಸಲಾಗಿದೆ. ರಜುರದಲ್ಲಿ 6,850 ನಕಲಿ ಆನ್ಲೈನ್ ಹೆಸರುಗಳನ್ನು ಸೇರಿಸಲಾಗಿದೆ’’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ‘‘ಹೆಸರುಗಳನ್ನು ತೆಗೆಯಲ್ಪಟ್ಟವರು ಮತ್ತು ಸೇರಿಸಲ್ಪಟ್ಟವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ’’ ಎಂದರು.
ರಜುರದಲ್ಲಿ ಸೇರಿಸಲ್ಪಟ್ಟಿರುವ ಒಂದು ಹೆಸರು ಹೀಗಿದೆ: ‘YUH UQJJW’
ವಿಳಾಸ: ‘Sasti, Sasti’
ಇಂಥದೇ ಮಾದರಿ ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ಹರ್ಯಾಣ ಮತ್ತು ಉತ್ತರಪ್ರದೇಶದಲ್ಲಿ ಕಂಡುಬಂದಿದೆ ಎಂದು ರಾಹುಲ್ ನುಡಿದರು.







