ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ: ರಾಹುಲ್ ಗಾಂಧಿಗೆ ಜಾರ್ಖಂಡ್ ನ್ಯಾಯಾಲಯದಿಂದ ಜಾಮೀನು

ರಾಹುಲ್ ಗಾಂಧಿ
ಚೈಬಸಾ (ಜಾರ್ಖಂಡ್): 2018ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿಗೆ ಜಾರ್ಖಂಡ್ ನ ಚೈಬಸಾದ ಶಾಸಕ/ಸಂಸದರ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ.
ಇಂದು (ಬುಧವಾರ) ಬೆಳಗ್ಗೆ ಸುಮಾರು 10.55ರ ವೇಳೆಗೆ ರಾಹುಲ್ ಗಾಂಧಿ ನ್ಯಾಯಾಲಯದೆದುರು ಹಾಜರಾದರು.
ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಪರ ವಕೀಲ ಪ್ರಣವ್ ದರಿಪ, “ಜಾರ್ಖಂಡ್ ಹೈಕೋರ್ಟ್ ನ ನಿರ್ದೇಶನದಂತೆ ರಾಹುಲ್ ಗಾಂಧಿ ಇಂದು ನ್ಯಾಯಾಲಯದೆದುರು ಹಾಜರಾದರು. ಜಾಮೀನಿಗಾಗಿ ಮನವಿ ಮಾಡಿದ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಈಗ ಈ ಪ್ರಕ್ರಿಯೆಯನ್ನು ನಾವು ಮುಂದುವರಿಸುತ್ತೇವೆ” ಎಂದು ತಿಳಿಸಿದರು.
ಜೂನ್ 26ರಂದು ತನ್ನೆದುರು ಹಾಜರಾಗುವಂತೆ ಜೂನ್ 2ರಂದು ಇಲ್ಲಿನ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಜಾರ್ಖಂಡ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಸೂಚಿಸಿರುವ ನಿರ್ದಿಷ್ಟ ದಿನಾಂಕದಂದು ನನ್ನ ಕಕ್ಷಿದಾರರು ನ್ಯಾಯಾಲಯದೆದುರು ಹಾಜರಾಗಲು ಸಾಧ್ಯವಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗಲು ಆಗಸ್ಟ್ 6ರಂದು ಅವಕಾಶ ಮಂಜೂರು ಮಾಡಬೇಕು ಎಂದು ರಾಹುಲ್ ಗಾಂಧಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಜಾರ್ಖಂಡ್ ನ್ಯಾಯಾಲಯ ರಾಹುಲ್ ಗಾಂಧಿ ಪರ ವಕೀಲರ ಮನವಿಯನ್ನು ಪುರಸ್ಕರಿಸಿತ್ತು.
2018ರಲ್ಲಿ ಚೈಬಸಾದಲ್ಲಿ ನಡೆದಿದ್ದ ಸಮಾವೇಶವೊಂದರಲ್ಲಿ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಮಾನಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರತಾಪ್ ಕುಮಾರ್ ಎಂಬ ವ್ಯಕ್ತಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.







