ತಿಳಿಯಾದ ಭಾರತ - ಪಾಕಿಸ್ತಾನ ನಡುವಿನ ಉದ್ವಿಗ್ನತೆ: ಚುನಾವಣಾ ರಾಜ್ಯ ಬಿಹಾರಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ

ರಾಹುಲ್ ಗಾಂಧಿ , ನರೇಂದ್ರ ಮೋದಿ | PTI
ಪಟ್ನಾ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯಬಹುದು ಎಂಬ ಭೀತಿ ತಿಳಿಯಾಗುತ್ತಿದ್ದಂತೆಯೆ, ಚುನಾವಣಾ ರಾಜ್ಯವಾದ ಬಿಹಾರಕ್ಕೆ ಭೇಟಿ ನೀಡಲು ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ಹಾಗೂ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ತಾರಾ ನಾಯಕರೆಲ್ಲ ಸಜ್ಜಾಗಿದ್ದಾರೆ. ಬಿಹಾರದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಈ ತಿಂಗಳ ಮೂರನೆಯ ವಾರದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಬಿಹಾರಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿನ ತಮ್ಮ ಸ್ವಕ್ಷೇತ್ರವಾದ ವಾರಾಣಸಿಯೊಂದಿಗೆ ಗಡಿ ಹಂಚಿಕೊಂಡಿರುವ ಬಿಹಾರದ ರೊಹ್ತಾಸ್ ನಲ್ಲಿ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೇ 15ರಂದು ರಾಹುಲ್ ಗಾಂಧಿ ಬಿಹಾರಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ಈ ವೇಳೆ ಅವರು ದರ್ಭಾಂಗ್ ಮಾತ್ರವಲ್ಲದೆ, ಗಯಾದಲ್ಲೂ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಐದು ತಿಂಗಳಲ್ಲಿ ಬಿಹಾರಕ್ಕೆ ರಾಹುಲ್ ಗಾಂಧಿ ನೀಡುತ್ತಿರುವ ನಾಲ್ಕನೆ ಭೇಟಿ ಇದಾಗಿದ್ದು, ಇದಕ್ಕೂ ಮುನ್ನ, ಕ್ರಮವಾಗಿ ಜನವರಿ 18, ಫೆಬ್ರವರಿ 4 ಹಾಗೂ ಎಪ್ರಿಲ್ 7ರಂದು ಕನ್ನಯ್ಯ ಕುಮಾರ್ ನೇತೃತ್ವದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಅವರು ಬಿಹಾರಕ್ಕೆ ಭೇಟಿ ನೀಡಿದ್ದರು.
ಬಿಹಾರದಲ್ಲಿ ನಿಸ್ತೇಜಗೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ನೀಡಲು ಯತ್ನಿಸುತ್ತಿರುವ ರಾಹುಲ್ ಗಾಂಧಿ, ತಮ್ಮ ಬಿಹಾರ ಭೇಟಿಯ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡಲು ಒಲವು ಹೊಂದಿಲ್ಲದ ಆರ್ಜೆಡಿಯೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ನಡುವೆ, ಬಿಹಾರದ ಬಿಜೆಪಿ ಮುಖ್ಯಸ್ಥ ದಿಲೀಪ್ ಜೈಸ್ವಾಲ್ ಅವರು ತಮ್ಮ ಪಕ್ಷದ ಉನ್ನತ ಪದಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ರೊಹ್ತಾಸ್ ಜಿಲ್ಲೆಯ ಬಿಕ್ರಂಗಂಜ್ ನಲ್ಲಿ ನಡೆಯಲಿದೆ ಎಂದು ಹೇಳಲಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಸಮಾವೇಶಕ್ಕಾಗಿನ ಸನ್ನದ್ಧತೆ ಕುರಿತು ಅವರೊಂದಿಗೆ ಚರ್ಚಿಸಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯದ ಹಿರಿಯ ಅಧಿಕಾರಿಗಳೂ ಕೂಡಾ ನರೇಂದ್ರ ಮೋದಿಯವರ ಪ್ರವಾಸ ಯೋಜನೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದು, ಈ ಯೋಜನೆ ಅಂತಿಮಗೊಂಡ ನಂತರ, ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸದ ದಿನಾಂಕಗಳನ್ನು ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ.







