ಬಿಹಾರ | ಮೀನುಗಾರರ ಜೊತೆ ಕೆರೆಗೆ ಜಿಗಿದು ಈಜಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ | Photo Credit : NDTV
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಮಿತ್ರ ಪಕ್ಷ ವಿಕಾಶ್ ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಚಿವ ಮುಕೇಶ್ ಸಾಹ್ನಿಯೊಂದಿಗೆ ಬೇಗುಸರಾಯಿಯ ಕೆರೆಯೊಂದಕ್ಕೆ ತೆರಳಿ, ಅಲ್ಲಿನ ಸ್ಥಳೀಯ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು.
ತಮ್ಮ ಟ್ರೇಡ್ ಮಾರ್ಕ್ ದಿರಿಸಾದ ಬಿಳಿ ಟಿ-ಶರ್ಟ್ ಹಾಗೂ ಕಪ್ಪು ಪ್ಯಾಂಟ್ ನೊಂದಿಗೆ ಕೆರೆಗಿಳಿದ ರಾಹುಲ್ ಗಾಂಧಿ, ಕೆರೆಯಲ್ಲಿ ಈಜಾಟವನ್ನೂ ನಡೆಸಿದರು. ಅವರಿಗೆ ಜೊತೆ ನೀಡಿದ ಮುಕೇಶ್ ಸಾಹ್ನಿ, ಮೀನಿನ ಬಲೆ ಹಿಡಿದುಕೊಂಡು ಕೆರೆಗೆ ಇಳಿದರು.
‘ಮಾಲಾ ಪುತ್ರ’ ಎಂದು ಜನರಿಂದ ಅಭಿಮಾನಪೂರ್ವಕವಾಗಿ ಕರೆಸಿಕೊಳ್ಳುವ ಮುಕೇಶ್ ಸಾಹ್ನಿ ಕೂಡಾ ಸ್ವತಃ ಮೀನುಗಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸೊಂಟದವರೆಗಿದ್ದ ಕೆರೆಯ ನೀರಿಗೆ ಧುಮುಕಿದ ಮುಕೇಶ್ ಸಾಹ್ನಿ, ತಮ್ಮ ನಾಯಕ ರಾಹುಲ್ ಗಾಂಧಿಯೊಂದಿಗೆ ತಾವು ಹಿಡಿದ ಮೀನಿನ ಲೆಕ್ಕಾಚಾರದಲ್ಲಿ ತೊಡಗಿದ್ದದ್ದು ಕಂಡು ಬಂದಿತು. ಈ ವೇಳೆ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಯುವ ನಾಯಕ ಕನ್ಹಯ್ಯ ಕುಮಾರ್ ಕೂಡಾ ಸ್ಥಳದಲ್ಲಿ ಉಪಸ್ಥಿತರಿದ್ದರು.
ಕೆರೆಯ ಬಳಿ ನೆರೆದಿದ್ದ ಅಸಂಖ್ಯಾತ ಮೀನುಗಾರ ಸಮುದಾಯಕ್ಕೆ ಸೇರಿದ ಜನರೂ ಕೂಡಾ ಕೆರೆಗೆ ಧುಮುಕಿ, ತಮ್ಮ ನಾಯಕರೊಂದಿಗೆ ಸೊಂಟ ಮಟ್ಟದ ನೀರಿನಲ್ಲಿ ಸೇರಿಕೊಂಡರು.
ಈ ಘಟನೆಯ ವಿಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, “ಮೀನುಗಾರರು ತಮ್ಮ ಕೆಲಸದಲ್ಲಿ ಎದುರಿಸುತ್ತಿರುವ ಸವಾಲುಗಳು ಹಾಗೂ ಸಮಸ್ಯೆಗಳ ಕುರಿತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿದರು” ಎಂದು ಹೇಳಿದೆ.
“ಮೀನು ಸಾಕಾಣಿಕೆಗೆ ವಿಮೆ ಯೋಜನೆ ಜಾರಿಗೊಳಿಸಲಾಗುವುದು ಹಾಗೂ ಪ್ರತಿ ಮೀನುಗಾರರ ಕುಟುಂಬಗಳಿಗೆ ಮೀನುಗಾರಿಕೆ ನಿಷೇಧವಿರುವ ಮೂರು ತಿಂಗಳ ವಿರಾಮದ ಅವಧಿಯಲ್ಲಿ ತಲಾ 5,000 ರೂ. ಹಣಕಾಸು ನೆರವು ಒದಗಿಸಲಾಗುವುದು ಎಂದು ಇಂಡಿಯಾ ಮೈತ್ರಿಕೂಟ ಭರವಸೆ ನೀಡಿದೆ” ಎಂದೂ ಆ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.
ರಾಹುಲ್ ಗಾಂಧಿ ಕೂಡಾ ಈ ಭೇಟಿಯ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ಮೀನುಗಾರರು ಬಿಹಾರದ ಆರ್ಥಿಕತೆಯಲ್ಲಿ ಬಹು ಮುಖ್ಯ ಭಾಗವಾಗಿದ್ದು, ಅವರಿಗೆ ನನ್ನ ಬೆಂಬಲವಿದೆ” ಎಂದು ಭರವಸೆ ನೀಡಿದ್ದಾರೆ.
“ವಿಕಾಸ್ ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಕೇಶ್ ಸಾಹ್ನಿಯೊಂದಿಗೆ ಇಂದು ಬಿಹಾರದ ಬೇಗುಸರಾಯಿಯ ಮೀನುಗಾರರ ಸಮುದಾಯವನ್ನು ಭೇಟಿ ಮಾಡಿದ್ದು ನನಗೆ ತುಂಬಾ ಖುಶಿ ನೀಡಿತು. ಅವರ ಕೆಲಸ ಎಷ್ಟು ಕುತೂಹಲಕಾರಿಯೊ, ಅವರ ಕೆಲಸದಲ್ಲಿರುವ ಸಮಸ್ಯೆಗಳು ಮತ್ತು ಸವಾಲುಗಳೂ ಅಷ್ಟೇ ಗಂಭೀರ ಸ್ವರೂಪದ್ದಾಗಿವೆ. ಹೀಗಿದ್ದೂ, ಅವರ ಕಠಿಣ ಪರಿಶ್ರಮ, ವ್ಯಾಮೋಹ, ಪ್ರತಿ ಹಂತದಲ್ಲಿನ ವ್ಯವಹಾರದ ಆಳವಾದ ತಿಳಿವಳಿಕೆ ಸ್ಫೂರ್ತಿದಾಯಕವಾಗಿದೆ. ಮೀನಗಾರರು ನೆಲೆಸಿರುವ ಬಿಹಾರದ ನದಿಗಳು, ನಾಲೆಗಳು, ಕೆರೆಗಳು ರಾಜ್ಯದ ಆರ್ಥಿಕತೆಯ ಬಹು ಮುಖ್ಯ ಭಾಗವಾಗಿವೆ. ನಾನು ಅವರ ಹಕ್ಕು ಮತ್ತು ಗೌರವದ ಪರವಾಗಿ ನಿಲ್ಲುತ್ತೇನೆ” ಎಂದೂ ಆಶ್ವಾಸನೆ ನೀಡಿದ್ದಾರೆ.







