ಎಸ್ಐಆರ್ ವಿರುದ್ಧ ಪ್ರತಿಪಕ್ಷದಿಂದ ‘ಟಿ-ಶರ್ಟ್ ಪ್ರತಿಭಟನೆ’

PC : PTI
ಹೊಸದಿಲ್ಲಿ, ಆ. 12: ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ‘ಇಂಡಿಯಾ’ ಮೈತ್ರಿಕೂಟದ ಹಲವು ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಇವರಲ್ಲಿ ಹಲವರು ಬಿಹಾರದ ಮತದಾರರ ಪಟ್ಟಿಯಲ್ಲಿ ಕಂಡು ಬಂದಿದೆ ಎನ್ನಲಾದ 124 ವರ್ಷದ ಮತದಾರರೊಬ್ಬರ ಹೆಸರನ್ನು ಬರೆದ ಬಿಳಿ ಟಿ ಶರ್ಟ್ ಧರಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಟಿಎಂಸಿಯ ಡೆರಿಕ್ ಒಬ್ರಿಯಾನ್, ಡಿಎಂಕೆಯ ಟಿ.ಆರ್. ಬಾಲು, ಎನ್ಸಿಪಿ (ಎಸ್ಪಿ)ಯ ಸುಪ್ರಿಯಾ ಸುಳೆ ಅಲ್ಲದೆ ಡಿಎಂಕೆ ಹಾಗೂ ಎಡರಂಗದ ಸಂಸದರು ಸಂಸತ್ತಿನ ಮಕರ ದ್ವಾರದ ಸಮೀಪ ಸೇರಿದರು.
ಪೋಸ್ಟರ್ ಗಳನ್ನು ಹಿಡಿದುಕೊಂಡಿದ್ದ ಅವರು ಘೋಷಣೆಗಳನ್ನು ಕೂಗಿದರು ಹಾಗೂ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಯನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಇದು 15ನೇ ದಿನದ ಪ್ರತಿಭಟನೆ. ಪ್ರತಿಭಟನೆ ನಿರತ ಸಂಸದರ ಎದುರು ‘‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’’ ಎಂದು ಬರೆದ ಬ್ಯಾನರ್ ಇತ್ತು.
ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಸಂಸದರು ‘ಮಿಂತಾ ದೇವಿ’ ಎಂದು ಬರೆದಿದ್ದ ಹಾಗೂ ಅವರ ಭಾವಚಿತ್ರವನ್ನು ಒಳಗೊಂಡಿದ್ದ ಟಿ ಶರ್ಟ್ ಧರಿಸಿದ್ದರು. ಈ ಟಿ ಶರ್ಟ್ ನ ಹಿಂಬದಿ ‘124 ನಾಟ್ ಔಟ್’ ಎಂದು ಬರೆಯಲಾಗಿತ್ತು.
ರಾಜೀವ್ ಕುಮಾರ್ ಹಾಗೂ ಜ್ಞಾನೇಶ್ ಕುಮಾರ್ ಅವರ ಉಸ್ತುವಾರಿಯ ಚುನಾವಣಾ ಆಯೋಗ ಬಿಜೆಪಿಯ ಘಟಕವಾಗಿದೆ ಎಂದು ಕಾಂಗ್ರೆಸ್ ನ ಮಾಣಿಕ್ಕಂ ಠಾಗೋರ್ ಆರೋಪಿಸಿದರು.
‘‘ಮಿಂತಾ ದೇವಿ ಚೊಚ್ಚಲ ಮತದಾರ. ಅವರ ಪ್ರಾಯ 124 ವರ್ಷ. ಮತದಾರರ ಪಟ್ಟಿ ಅವರ ಹೆಸರನ್ನು ಮೊದಲ ಬಾರಿಗೆ ಮತ ಚಲಾಯಿಸವವರು ಎಂದು ಉಲ್ಲೇಖಿಸಿದೆ. ನಾವು ಇಂತಹ ವಿಷಯಗಳ ಕುರಿತು ಚರ್ಚಿಸಲು ಬಯಸುತ್ತೇವೆ. ಮತದಾರರ ಪಟ್ಟಿ ಸಂಪೂರ್ಣವಾಗಿ ಇಂತಹ ವಂಚನೆಗಳಿಂದ ಕೂಡಿದೆ’’ ಎಂದು ಅವರು ಆರೋಪಿಸಿದ್ದಾರೆ.
ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷ ಪ್ರತಿಭಟನೆ ನಡೆಸುತ್ತಿದೆ. ಈ ವಿಷಯದ ಕುರಿತು ಉಭಯ ಸದನಗಳಲ್ಲಿ ಚರ್ಚೆ ನಡೆಸುವಂತೆ ಅದು ಆಗ್ರಹಿಸಿದೆ.
► ಅಭಿ ಪಿಚ್ಚರ್ ಬಾಕಿ ಹೈ: ರಾಹುಲ್ ಗಾಂಧಿ
ಚುನಾವಣಾ ಆಯೋಗ ‘ಒಬ್ಬ ವ್ಯಕ್ತಿ, ಒಂದು ಮತ’ ತತ್ವವನ್ನು ಜಾರಿಗೊಳಿಸುವ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
ಮತದಾರರ ಪಟ್ಟಿಯ ಅಕ್ರಮಗಳನ್ನು ಉಲ್ಲೇಖಿಸುತ್ತಾ ಅವರು ‘ಅಭಿ ಪಿಚ್ಚರ್ ಬಾಕಿ ಹೈ’ ಎಂದು ಹೇಳಿದ್ದಾರೆ. ತಮ್ಮ ಪಕ್ಷ ಸಂವಿಧಾನವನ್ನು ರಕ್ಷಿಸುವುದರಲ್ಲಿ ತೊಡಗಿದೆ. ನಾವು ಅದನ್ನು ಮುಂದುವರಿಸಲಿದ್ದೇವೆ ಎಂದು ಅವರು ಪ್ರತಿಪಾದಿಸಿದ್ದಾರೆ.
‘‘ಇದು ಒಂದು ಕ್ಷೇತ್ರದಲ್ಲಿ ಮಾತ್ರ ನಡೆದಿರುವುದು ಅಲ್ಲ. ಹಲವು ಕ್ಷೇತ್ರಗಳಲ್ಲಿ ನಡೆದಿದೆ. ಇದನ್ನು ರಾಷ್ಟ್ರಮಟ್ಟದಲ್ಲಿ ಹಾಗೂ ವ್ಯವಸ್ಥಿತವಾಗಿ ಮಾಡಲಾಗಿದೆ. ಚುನಾವಣಾ ಆಯೋಗಕ್ಕೆ ಇದು ತಿಳಿದಿದೆ. ನಮಗೆ ಕೂಡ ಇದು ತಿಳಿದಿದೆ’’ ಎಂದು ರಾಹುಲ್ ಗಾಂಧಿ ಸಂಸತ್ ಭವನದ ಸಂಕೀರ್ಣದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.







