ರಾಜಪುರ-ಶಂಭು ರೈಲ್ವೆ ಸ್ಫೋಟ ಪ್ರಕರಣ: ಅಮೆರಿಕದಿಂದ ಗಡೀಪಾರಾದ ಸುರಿಂದರ್ ಸಿಂಗ್ ಬಂಧನ

ಸಾಂದರ್ಭಿಕ ಚಿತ್ರ | Photo Credit : PTI
ಚಂಡಿಗಢ: ಅಮೆರಿಕದಿಂದ ಗಡೀಪಾರಾದ ಬೆನ್ನಲ್ಲೇ ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ (ಕೆಝಡ್ಎಫ್)ನ ಬೆಂಬಲಿಗ ಸುರಿಂದರ್ ಸಿಂಗ್ ಆಲಿಯಾಸ್ ತಿಕ್ರಿವಾಲ್ನನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಈ ಪ್ರಕರಣ ಏಪ್ರಿಲ್ 27ರಂದು ಶಂಭು ಮತ್ತು ರಾಜಪುರ ರೈಲ್ವೆ ನಿಲ್ದಾಣಗಳ ನಡುವಿನ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಡಿಎಫ್ಸಿಸಿಐಎಲ್) ರೈಲು ಮಾರ್ಗದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದ್ದಾಗಿದೆ.
ಭಯೋತ್ಪಾದನಾ ಚಟುವಟಿಕೆಗಳನ್ನು ವಿಸ್ತರಿಸಲು, ಕೋಮು ಸೌಹಾರ್ದತೆ ಕದಡಲು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬುಡಮೇಲು ಮಾಡಲು ಕೆಝಡ್ಎಫ್ ಈ ಸ್ಫೋಟ ನಡೆಸಿದೆ ಎಂದು ಆರೋಪಿಸಲಾಗಿದೆ.
ತನಿಖೆಯ ಸಂದರ್ಭ ಎನ್ಐಎ ಸುರಿಂದರ್ ಸಿಂಗ್ ವಿರುದ್ಧ ಲುಕ್ಔಟ್ ಸರ್ಕ್ಯುಲರ್ ಹೊರಡಿಸಿತ್ತು. ಪಂಜಾಬ್ನ ವಿವಿಧ ಜಿಲ್ಲೆಗಳಲ್ಲಿ ಆತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಸ್ಫೋಟದ ನಂತರ ಸುರಿಂದರ್ ಸಿಂಗ್ ಈ ಘಟನೆಯನ್ನು ವೈಭವೀಕರಿಸಿ ಮತ್ತು ಬೆಂಬಲಿಸಿ ತನ್ನ ಫೇಸ್ಬುಕ್ ಖಾತೆಯಲ್ಲಿ ವೀಡಿಯೊ ಅಪ್ಲೋಡ್ ಮಾಡಿದ್ದ ಎಂಬುದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಸ್ಫೋಟ ನಡೆಸುವಾಗ ಮೃತಪಟ್ಟ ಆರೋಪಿ ಜಗರೂಪ್ ಸಿಂಗ್ ಸೇರಿದಂತೆ ಪಿತೂರಿಯಲ್ಲಿ ಭಾಗಿಯಾಗದ್ದ ಇತರರನ್ನೂ ಆತ ವೀಡಿಯೊದಲ್ಲಿ ಬೆಂಬಲಿಸಿದ್ದ.
ಆತ ನಿಷೇಧಿತ ಭಯೋತ್ಪಾದಕ ಸಂಸ್ಥೆಯಾದ ಕೆಝಡ್ಎಫ್ ಅನ್ನು ‘ಕೌಮಿ ಸಂಸ್ಥೆ’ ಎಂದು ಬಣ್ಣಿಸಿದ್ದ. ಭಯೋತ್ಪಾದಕ ರಂಜಿತ್ ಸಿಂಗ್ ಅಲಿಯಾಸ್ ನೀಟಾನನ್ನು ‘‘ಕೌಮ್ನ ಜನರಲ್’’ (ಸಮುದಾಯದ ನಾಯಕ) ಎಂದು ಕರೆದಿದ್ದ.
ಈ ಬಂಧನದೊಂದಿಗೆ, ರಾಜಪುರ-ಶಂಭು ರೈಲ್ವೆ ಸ್ಪೋಟ ಪ್ರಕರಣದಲ್ಲಿ ಎನ್ಐಎ ಇದುವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ.






