Rajasthan | ರಿಯಾಯಿತಿ ಪಡೆದ ಕಂಪೆನಿಯ ರೆಸಾರ್ಟ್ ನಲ್ಲೇ ಕುಟುಂಬಕ್ಕೆ 36 ವಿಲ್ಲಾ; IAS - IPS ದಂಪತಿ ವಿರುದ್ಧ ತನಿಖೆ
ಕಂಪೆನಿಗೆ ರಿಯಾಯಿತಿ ಪ್ಯಾಕೇಜ್ ಮಂಜೂರಾದ ದಿನವೇ 20 ವಿಲ್ಲಾ ನೋಂದಣಿ!

Photo: x.com/IndiaToday
ಜೈಪುರ: ಖಾಸಗಿ ರೆಸಾರ್ಟ್ ಕಂಪೆನಿಗೆ ವಿಶೇಷ ಸರ್ಕಾರಿ ರಿಯಾಯಿತಿ ನೀಡಿದ ಆರೋಪ ಎದುರಿಸುತ್ತಿರುವ ರಾಜಸ್ಥಾನದ ಹಿರಿಯ ಐಎಎಸ್ ಅಧಿಕಾರಿ ಶಿಖರ್ ಅಗರ್ವಾಲ್ ಅವರ ಕುಟುಂಬದವರು, ಅದೇ ಕಂಪೆನಿಯ ಎರಡು ರೆಸಾರ್ಟ್ಗಳಲ್ಲಿ 36 ವಿಲ್ಲಾಗಳನ್ನು ಖರೀದಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉದಯಪುರ ಮತ್ತು ಅಲ್ವಾರ್ನಲ್ಲಿರುವ ಈ ವಿಲ್ಲಾಗಳ ಒಟ್ಟು ಮೌಲ್ಯ ಸುಮಾರು 5.52 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ವಿಲ್ಲಾಗಳನ್ನು ಖರೀದಿಸಲಾಗಿದೆ ಎಂಬ ಆರೋಪದ ಕುರಿತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ಆರಂಭಿಸಿದೆ. ಪ್ರಕರಣದ ಬೆನ್ನಲ್ಲೇ ಅಗರ್ವಾಲ್ ಅವರ ಪತ್ನಿ, ಐಪಿಎಸ್ ಅಧಿಕಾರಿ ಪ್ರಶಾಖಾ ಮಾಥುರ್ ಅವರನ್ನು ಹುದ್ದೆಯಿಂದ ತೆರವುಗೊಳಿಸಲಾಗಿದೆ.
ಅಗರ್ವಾಲ್ ಇತ್ತೀಚಿನವರೆಗೂ ರಾಜಸ್ಥಾನದ ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 'ಅನಂತ' ಬ್ರಾಂಡ್ ಅಡಿಯಲ್ಲಿ ಹೋಟೆಲ್ ಮತ್ತು ರೆಸಾರ್ಟ್ ಗಳನ್ನು ನಡೆಸುವ 'ಗೋಯಲ್ ಫ್ಯಾಷನ್ಸ್ ಪ್ರೈವೇಟ್ ಲಿಮಿಟೆಡ್' ಕಂಪೆನಿಯ ನಿರ್ದೇಶಕರೊಂದಿಗಿನ ಅವರ ಸಂಬಂಧದ ಕುರಿತು ಎಸಿಬಿ ತನಿಖೆ ನಡೆಸುತ್ತಿದೆ.
ಅಗರ್ವಾಲ್ ವಿರುದ್ಧ ಕಂಪೆನಿಗೆ ವಿಶೇಷ ರಿಯಾಯಿತಿಗಳನ್ನು ನೀಡಿರುವುದು, ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಸಿರುವುದು ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಸರಿಯಾಗಿ ಪರಿಶೀಲಿಸದೆ ಅನುಮೋದನೆ ನೀಡಿರುವ ಆರೋಪಗಳು ಕೇಳಿ ಬಂದಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಕಂಪೆನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆಯೇ ಮತ್ತು ಕುಟುಂಬದವರ ಹೆಸರಿನಲ್ಲಿ ಕಡಿಮೆ ದರಕ್ಕೆ ವಿಲ್ಲಾಗಳನ್ನು ಖರೀದಿಸಿರುವುದಕ್ಕೂ ಈ ಬೆಳವಣಿಗೆಗಳಿಗೂ ಸಂಬಂಧವಿದೆಯೇ ಎಂಬುದನ್ನು ಎಸಿಬಿ ಪರಿಶೀಲಿಸುತ್ತಿದೆ.
ಅಕ್ಟೋಬರ್ 27ರಂದು 'ದೈನಿಕ್ ಭಾಸ್ಕರ್' ಪತ್ರಿಕೆಯಲ್ಲಿ ಪ್ರಕಟವಾದ ವರದಿ, ಕೈಗಾರಿಕಾ ಇಲಾಖೆಯಿಂದ ಲಭ್ಯವಾದ ಮಾಹಿತಿ ಹಾಗೂ ಗೌಪ್ಯ ಮೂಲಗಳಿಂದ ಸಂಗ್ರಹಿಸಿದ ವಿವರಗಳ ಆಧಾರದಲ್ಲಿ ಎಸಿಬಿ ಪ್ರಾಥಮಿಕ ವಿಚಾರಣೆ ನಡೆಸಿತ್ತು. ಅಗರ್ವಾಲ್, ಕಂಪೆನಿಯ ನಿರ್ದೇಶಕರು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರರ ವಿರುದ್ಧ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಭ್ರಷ್ಟಾಚಾರ ತಡೆ ಕಾಯ್ದೆ–1988ರ ಸೆಕ್ಷನ್ 17ಎ ಅಡಿಯಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದು ಎಸಿಬಿ ಮಹಾನಿರ್ದೇಶಕ ಗೋವಿಂದ್ ಗುಪ್ತಾ ತಿಳಿಸಿದ್ದಾರೆ.
ಕಂಪೆನಿಯ ನಿರ್ದೇಶಕರೊಂದಿಗೆ ಸೇರಿ ಅಗರ್ವಾಲ್ ಸಂಚು ರೂಪಿಸಿ, ಅಧಿಕಾರ ದುರುಪಯೋಗಪಡಿಸಿಕೊಂಡು ತಮಗೂ ಖಾಸಗಿ ಕಂಪೆನಿಗೂ ಲಾಭ ಮಾಡಿಕೊಟ್ಟಿರಬಹುದು ಎಂದು ಎಸಿಬಿ ಪ್ರಾಥಮಿಕ ವಿಚಾರಣೆಯಲ್ಲಿ ಶಂಕೆ ವ್ಯಕ್ತಪಡಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಗಣನೀಯ ಆರ್ಥಿಕ ನಷ್ಟ ಉಂಟಾಗಿರಬಹುದು ಎಂದು ಎಸಿಬಿ ಅಂದಾಜಿಸಿದೆ.
ಮೂರು ಹುದ್ದೆಗಳಲ್ಲಿನ ನಿರ್ಧಾರಗಳ ಪರಿಶೀಲನೆ
ಅಗರ್ವಾಲ್ ಅವರು ಈ ಹಿಂದೆ ಉದಯಪುರದ ಜಿಲ್ಲಾಧಿಕಾರಿಯಾಗಿ, ರಾಜಸ್ಥಾನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಹಾಗೂ ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಮೂರು ಹುದ್ದೆಗಳಲ್ಲಿ ಅವರು ಕೈಗೊಂಡ ನಿರ್ಧಾರಗಳನ್ನೂ ಎಸಿಬಿ ಪರಿಶೀಲಿಸುತ್ತಿದೆ.
ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಾಗ ಅವರು ತೆಗೆದುಕೊಂಡ ನಿರ್ಧಾರಗಳಿಂದ ಗೋಯಲ್ ಫ್ಯಾಷನ್ಸ್ ಕಂಪೆನಿಗೆ ಸಾಮಾನ್ಯವಾಗಿ ದೊರೆಯದ ವಿಶೇಷ ಅನುಕೂಲಗಳು ಸಿಕ್ಕಿವೆಯೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಆ ನಿರ್ಧಾರಗಳಿಗೂ ಕುಟುಂಬದವರ ಹೆಸರಿನಲ್ಲಿ ನಡೆದ ವಿಲ್ಲಾ ಖರೀದಿಗೂ ಸಂಬಂಧವಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.
ಬುಜ್ಧಾದಲ್ಲಿ 20 ವಿಲ್ಲಾ ಖರೀದಿ
ಗೋಯಲ್ ಫ್ಯಾಷನ್ಸ್ ಕಂಪೆನಿಯು ಉದಯಪುರದ ಬುಜ್ಧಾ ಮತ್ತು ಅಲ್ವಾರ್ ಜಿಲ್ಲೆಯ ಅಜಬ್ ಗಢದಲ್ಲಿ 'ಅನಂತ' ಬ್ರಾಂಡ್ ಅಡಿಯಲ್ಲಿ ಹೋಟೆಲ್ ಮತ್ತು ರೆಸಾರ್ಟ್ ಗಳನ್ನು ನಡೆಸುತ್ತಿದೆ.
ಉದಯಪುರದ ಬುಜ್ಧಾದಲ್ಲಿರುವ ರೆಸಾರ್ಟ್ನಲ್ಲಿ 2026ರ ಮಾರ್ಚ್ ನಲ್ಲಿ 20 ವಿಲ್ಲಾಗಳನ್ನು ಖರೀದಿಸಲಾಗಿದೆ. ಈ ಪೈಕಿ 10 ವಿಲ್ಲಾಗಳು ಅಗರ್ವಾಲ್ ಅವರ ಹೆಸರಿನಲ್ಲಿ ಹಾಗೂ ಉಳಿದ 10 ವಿಲ್ಲಾಗಳು ಅವರ ಪತ್ನಿ ಪ್ರಶಾಖಾ ಮಾಥುರ್ ಅವರ ಹೆಸರಿನಲ್ಲಿ ನೋಂದಣಿಯಾಗಿವೆ.
ಪ್ರತಿ ವಿಲ್ಲಾವನ್ನು ಸುಮಾರು 15 ಲಕ್ಷ ರೂ.ಗೆ ಖರೀದಿಸಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಬುಜ್ಧಾದ 20 ವಿಲ್ಲಾಗಳ ಒಟ್ಟು ಮೌಲ್ಯ ಸುಮಾರು 3 ಕೋಟಿ ರೂ. ಆಗಿದೆ.
ಅಜಬ್ಗಢದಲ್ಲಿ ಪುತ್ರರು, ಪತ್ನಿಯ ಪೋಷಕರ ಹೆಸರಿನಲ್ಲೂ ವಿಲ್ಲಾ
ಅಲ್ವಾರ್ ಜಿಲ್ಲೆಯ ಅಜಬ್ಗಢದಲ್ಲಿರುವ 'ಅನಂತ' ರೆಸಾರ್ಟ್ ನಲ್ಲಿಯೂ ಅಗರ್ವಾಲ್ ಕುಟುಂಬದವರು 16 ವಿಲ್ಲಾಗಳನ್ನು ಖರೀದಿಸಿದ್ದಾರೆ.
ಈ ಪೈಕಿ ನಾಲ್ಕು ವಿಲ್ಲಾಗಳು ಅಗರ್ವಾಲ್ ಅವರ ಹೆಸರಿನಲ್ಲಿ ಹಾಗೂ ನಾಲ್ಕು ಅವರ ಪತ್ನಿ ಪ್ರಶಾಖಾ ಮಾಥುರ್ ಅವರ ಹೆಸರಿನಲ್ಲಿ ನೋಂದಣಿಯಾಗಿವೆ. ಅವರ ಇಬ್ಬರು ಪುತ್ರರ ಹೆಸರಿನಲ್ಲಿ ತಲಾ ಎರಡು ವಿಲ್ಲಾಗಳಂತೆ ನಾಲ್ಕು ವಿಲ್ಲಾಗಳಿವೆ. ಉಳಿದ ನಾಲ್ಕು ವಿಲ್ಲಾಗಳು ಪ್ರಶಾಖಾ ಅವರ ತಂದೆ-ತಾಯಿಯ ಹೆಸರಿನಲ್ಲಿವೆ.
ಅಗರ್ವಾಲ್ ಮತ್ತು ಅವರ ಪತ್ನಿಯ ಹೆಸರಿನಲ್ಲಿರುವ ಎಂಟು ವಿಲ್ಲಾಗಳಿಗೆ ತಲಾ 16.5 ಲಕ್ಷ ರೂ. ಪಾವತಿಸಲಾಗಿದೆ. ಪುತ್ರರ ಹೆಸರಿನಲ್ಲಿರುವ ನಾಲ್ಕು ವಿಲ್ಲಾಗಳನ್ನು ತಲಾ 15 ಲಕ್ಷ ರೂ.ಗೆ ಖರೀದಿಸಲಾಗಿದೆ. ಪತ್ನಿಯ ತಂದೆ-ತಾಯಿಯ ಹೆಸರಿನಲ್ಲಿರುವ ನಾಲ್ಕು ವಿಲ್ಲಾಗಳಿಗೂ ತಲಾ 16.5 ಲಕ್ಷ ರೂ. ಪಾವತಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬುಜ್ಧಾದ 20 ಮತ್ತು ಅಜಬ್ಗಢದ 16 ವಿಲ್ಲಾಗಳು ಸೇರಿ ಒಟ್ಟು 36 ವಿಲ್ಲಾಗಳಾಗಿವೆ. ಇವುಗಳ ಒಟ್ಟು ಮೌಲ್ಯ ಸುಮಾರು 5.52 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ಈ ವಿಲ್ಲಾಗಳನ್ನು ಖರೀದಿಸಲಾಗಿದೆ ಎಂಬ ಆರೋಪವೂ ತನಿಖೆಯ ವ್ಯಾಪ್ತಿಯಲ್ಲಿದೆ.
ರಿಯಾಯಿತಿ ಪ್ಯಾಕೇಜ್ ಮಂಜೂರಾದ ದಿನವೇ 20 ವಿಲ್ಲಾ ನೋಂದಣಿ
2026ರ ಮಾರ್ಚ್ 27ರಂದು ರಾಜಸ್ಥಾನದ ಹಣಕಾಸು ಇಲಾಖೆಯು ಗೋಯಲ್ ಫ್ಯಾಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ವಿಶೇಷ ರಿಯಾಯಿತಿಗಳನ್ನೊಳಗೊಂಡ ಆರ್ಥಿಕ ಪ್ಯಾಕೇಜ್ ಮಂಜೂರು ಮಾಡಿತ್ತು. ಇದೇ ದಿನ ಅಗರ್ವಾಲ್ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ 20 ವಿಲ್ಲಾಗಳು ನೋಂದಣಿಯಾಗಿದ್ದವು.
ಕಂಪೆನಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಮಂಜೂರಾದ ದಿನವೇ ಕುಟುಂಬದವರ ಹೆಸರಿನಲ್ಲಿ ವಿಲ್ಲಾಗಳು ನೋಂದಣಿಯಾಗಿರುವುದು ಎಸಿಬಿಯ ಗಮನ ಸೆಳೆದಿದೆ. ಸರ್ಕಾರದ ರಿಯಾಯಿತಿಗಳು, ಅಗರ್ವಾಲ್ ಅವರ ಅಧಿಕಾರ ದುರುಪಯೋಗದ ಆರೋಪ ಮತ್ತು ಕುಟುಂಬದವರ ಹೆಸರಿನಲ್ಲಿ ನಡೆದ ವಿಲ್ಲಾ ಖರೀದಿಯ ನಡುವೆ ಸಂಬಂಧವಿದೆಯೇ ಎಂಬುದನ್ನು ಎಸಿಬಿ ಪರಿಶೀಲಿಸುತ್ತಿದೆ.
ಪತ್ನಿ ಪ್ರಶಾಖಾ ಮಾಥುರ್ ಹುದ್ದೆಯಿಂದ ತೆರವು
ಅಗರ್ವಾಲ್ ಅವರ ಪತ್ನಿ ಪ್ರಶಾಖಾ ಮಾಥುರ್ 1995ರ ಬ್ಯಾಚ್ನ ಐಪಿಎಸ್ ಅಧಿಕಾರಿ. ಅವರು ಜೈಪುರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಯೋಜನೆ, ಆಧುನೀಕರಣ ಮತ್ತು ಕಲ್ಯಾಣ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿಪಿ) ಕಾರ್ಯನಿರ್ವಹಿಸುತ್ತಿದ್ದರು.
ಅಕ್ಟೋಬರ್ 31ರಂದು ರಾಜಸ್ಥಾನ ಸರ್ಕಾರ ಅವರನ್ನು ಈ ಹುದ್ದೆಯಿಂದ ತೆರವುಗೊಳಿಸಿ, ಮುಂದಿನ ಆದೇಶದವರೆಗೆ ಎಪಿಒಗೆ ಒಳಪಡಿಸಿದೆ. ಅಗರ್ವಾಲ್ ವಿರುದ್ಧ ಎಸಿಬಿ ತನಿಖೆ ಆರಂಭವಾದ ಬೆನ್ನಲ್ಲೇ ಈ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆ.






