ರಾಜಸ್ಥಾನ: ದಲಿತ ಕಾಂಗ್ರೆಸ್ ನಾಯಕನ ಭೇಟಿ ಬಳಿಕ ದೇವಸ್ಥಾನವನ್ನು ‘ಶುದ್ಧೀಕರಿಸಿದ್ದ’ ಮಾಜಿ ಶಾಸಕನನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ

ಜ್ಞಾನದೇವ ಅಹುಜಾ | PTI
ಜೈಪುರ: ದಲಿತ ಕಾಂಗ್ರೆಸ್ ನಾಯಕ ಟಿಕಾರಾಮ ಜುಲ್ಲಿ ಅವರು ಭೇಟಿ ನೀಡಿದ್ದ ರಾಜಸ್ಥಾನದ ಆಲ್ವಾರ್ನ ದೇವಸ್ಥಾನವೊಂದಲ್ಲಿ ‘ಶುದ್ಧೀಕರಣ’ ವಿಧಿಯನ್ನು ನಡೆಸಿದ್ದ ಮಾಜಿ ಶಾಸಕ ಜ್ಞಾನದೇವ ಅಹುಜಾ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದೆ. ರಾಜಸ್ಥಾನ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಜುಲ್ಲಿ ಈ ತಿಂಗಳ ಪೂರ್ವಾರ್ಧದಲ್ಲಿ ರಾಮ ನವಮಿ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಜುಲ್ಲಿಯವರ ಭೇಟಿಯ ಬಳಿಕ ಎ.7 ರಂದು ಅಹುಜಾ ದೇವಸ್ಥಾನದಲ್ಲಿ ‘ಶುದ್ಧೀಕರಣ’ ವಿಧಿಯನ್ನು ನಡೆಸಿದ್ದರು. ಜುಲ್ಲಿ ‘ಹಿಂದುತ್ವ ವಿರೋಧಿ’ ಮತ್ತು ‘ಸನಾತನ ವಿರೋಧಿ’ಯಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದರು.
‘ಇದು ಶ್ರೀರಾಮನ ಮಂದಿರ. ಕೆಲವು ಅಶುದ್ಧ ಜನರು ಇಲ್ಲಿಗೆ ಬಂದಿದ್ದರು. ಹೀಗಾಗಿ ನಾನು ಶ್ರೀರಾಮನ ಪಾದಗಳಿಗೆ ಗಂಗಾಜಲವನ್ನು ಸಿಂಪಡಿಸಿದ್ದೇನೆ’ಎಂದು ಅವರು ಹೇಳಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿಯು, ಅಹುಜಾರ ಅಶಿಸ್ತಿನ ವರ್ತನೆ ಸಾಬೀತಾಗಿದ್ದು, ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ರವಿವಾರ ತಿಳಿಸಿದೆ. ಅಹುಜಾ ರವಿವಾರ ರಾಜ್ಯ ಬಿಜೆಪಿಯ ಶಿಸ್ತು ಸಮಿತಿಯ ಮುಂದೆ ಹಾಜರಾಗಿದ್ದರು.
ಜುಲ್ಲಿ ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಹುದ್ದೆಯನ್ನು ಅಲಂಕರಿಸಿರುವ ಮೊದಲ ದಲಿತ ರಾಜಕಾರಣಿಯಾಗಿದ್ದಾರೆ.
ಅಹುಜಾರಿಂದ ಶುದ್ಧೀಕರಣಕ್ಕೆ ಎ.9ರಂದು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಬಿಜೆಪಿಯು ನಿರಂತರವಾಗಿ ದಲಿತರನ್ನು ಅವಮಾನಿಸುತ್ತಿದೆ ಮತ್ತು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ಮೋದಿಜಿ, ದೇಶವನ್ನು ಸಂವಿಧಾನ ಮತ್ತು ಅದರ ಆದರ್ಶಗಳಿಂದ ನಡೆಸಲಾಗುತ್ತದೆ. ‘ಬಹುಜನ’ರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸುವ ಮನುಸ್ಮೃತಿಯಿಂದಲ್ಲ ಎಂದು ಅವರು ಹೇಳಿದ್ದರು.







