ತಪ್ಪು ರನ್ವೇಯಲ್ಲಿ ಇಳಿದ ರಾಜಸ್ಥಾನ ಸಿಎಂ ವಿಮಾನ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರನ್ನು ದೆಹಲಿಯಿಂದ ಫಲೋಡಿಗೆ ಕರೆಯುತ್ತಿದ್ದ ಚಾರ್ಟರ್ಡ್ ವಿಮಾನ ಕಳೆದ ಗುರುವಾರ ಗಮ್ಯಸ್ಥಾನದಲ್ಲಿ ತಪ್ಪು ರನ್ವೇ ಯಲ್ಲಿ ಇಳಿದ ಅಂಶ ಬೆಳಕಿಗೆ ಬಂದಿದೆ. ಫಲೋಡಿ ವಾಯು ನೆಲೆಯಲ್ಲಿ ಇಳಿಯಬೇಕಿದ್ದ ಫಾಲ್ಕನ್ 2000 ವಿಮಾನ ನಗರದ ನಾಗರಿಕ ಏರ್ಸ್ಟ್ರಿಪ್ ನಲ್ಲಿ ಇಳಿಯಿತು. ಪೈಲಟ್ ಗಳಿಗೆ ತಮ್ಮ ತಪ್ಪಿನ ಅರಿವಾಗಿ ಮತ್ತೆ ವಿಮಾನ ಸಿವಿಲ್ ಏರ್ಸ್ಟ್ರಿಪ್ ನಿಂದ ಟೇಕಾಫ್ ಆಗಿ ಐಎಎಫ್ ನಿಲ್ದಾಣದಲ್ಲಿ ಇಳಿಯಿತು. ಈ ಘಟನೆ ಬಗ್ಗೆ ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪೈಲಟ್ ಗಳನ್ನು ಕರ್ತವ್ಯದಿಂದ ಮುಕ್ತಿಗೊಳಿಸಿದೆ.
"ಸಿಎಂ ಜುಲೈ 31ರಂದು ಮಧ್ಯಾಹ್ನ 3 ಗಂಟೆಗೆ ದೆಹಲಿಯಿಂದ ಫಲೋಡಿಗೆ ಪ್ರಯಾಣ ಬೆಳೆಸಿದರು. ಫಲೋಡಿಯ ಸಿವಿಲ್ ಏರ್ಸ್ಟ್ರಿಪ್ ನಲ್ಲಿ ವಿಮಾನ ಇಳಿಯಿತು. ತಕ್ಷಣವೇ ಪೈಲಟ್ ಗಳು ವಿಮಾನವನ್ನು ತಪ್ಪು ಏರ್ಸ್ಟ್ರಿಪ್ ನಿಂದ ಟೇಕಾಫ್ ಮಾಡಿ ಫಲೋಡಿ ವಾಯುನೆಲೆಯಲ್ಲಿ ಇಳಿಸಿದರು. ಮೊದಲು ಇಳಿದ ವಿಮಾನ ನಿಲ್ದಾಣದಿಂದ ಐದು ಕಿಲೋಮೀಟರ್ ದೂರದ ಐಎಎಫ್ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯಬೇಕಿತ್ತು. ಅಲ್ಲಿ ಇಳಿದು ಕೆಲ ಗಂಟೆಗಳ ವಿಶ್ರಾಂತಿ ಪಡೆದ ಸಿಎಂ ಬಳಿಕ ಜೈಪುರಕ್ಕೆ ಪ್ರಯಾಣ ಬೆಳೆಸಿದರು. ಫಾಲ್ಕನ್ 2000 ವಿಮಾನ ಅದೇ ದಿನ ರಾತ್ರಿ ದೆಹಲಿಗೆ ವಾಪಸ್ಸಾಯಿತು" ಎಂದು ಮೂಲಗಳು ಹೇಳಿವೆ.
ವಿಮಾನ ತಪ್ಪು ನಿಲ್ದಾಣದಲ್ಲಿ ಇಳಿದ ಬಗ್ಗೆ ವಿಮಾನಯಾನ ಕಂಪನಿ ಡಿಜಿಸಿಎಗೆ ವರದಿ ಸಲ್ಲಿಸಿದೆ. ಪರಸ್ಪರ ಐದು ಕಿಲೋಮೀಟರ್ ದೂರದಲ್ಲಿರುವ ಐಎಎಫ್ ನಿಲ್ದಾಣ ಹಾಗೂ ಸಿವಿಲ್ ಏರ್ಸ್ಟ್ರಿಪ್ ಒಂದೇ ಬಗೆಯ ಭೌಗೋಳಿಕ ದೃಶ್ಯವನ್ನು ಹೊಂದಿವೆ. ಎರಡೂ ರನ್ ವೇ ಗಳು ಕೂಡಾ ಒಂದೇ ತೆರನಾಗಿ ಕಾಣುತ್ತಿವೆ. ಸ್ಥಳಕ್ಕೆ ಸಮೀಪಿಸಿದಾಗ ವಿಮಾನ ಸಿಬ್ಬಂದಿ ತಪ್ಪಾಗಿ ಗುರುತಿಸಿದರು" ಎಂದು ವರದಿಯಲ್ಲಿ ವಿವರಿಸಲಾಗಿದೆ. ವಿಮಾನ ಟೇಕಾಫ್ ಆಗುವ ಮುನ್ನ ಪೈಲಟ್ ಗಳು ವಿಮಾನ ನಿಲ್ದಾಣದ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆಯಬೇಕಿತ್ತು. ಇಂಥ ಘಟನೆಗಳು ಆಗದಂತೆ ಈ ಕಾರ್ಯವನ್ನು ನಿರ್ವಹಿಸಬೇಕಿತ್ತು" ಎಂದು ಮೂಲಗಳು ಹೇಳಿವೆ. ಡಸಾಲ್ಟ್ ಫಾಲ್ಕನ್ 2000 ವಿಮಾನವು ಫ್ರಾನ್ಸ್ ನ ವಾಣಿಜ್ಯ ವಿಮಾನವಾಗಿದ್ದು, 8-10 ಪ್ರಯಾಣಿಕರನ್ನು 6000 ಕಿಲೋಮೀಟರ್ ವರೆಗೆ ಒಯ್ಯುವ ಸಾಮರ್ಥ್ಯ ಹೊಂದಿದೆ.







